ಗೋಕರ್ಣ: ಶಿವರಾತ್ರಿ ಸಮುದ್ರಸ್ನಾನಕ್ಕೆ ಇಳಿದು ಅಲೆಗೆ ಕೊಚ್ಚಿ ಹೋಗುತ್ತಿದ್ದ ಮಹಾರಾಷ್ಟ್ರ ಮೂಲದ ನಾಲ್ವರು ಪ್ರವಾಸಿಗರನ್ನು ಹಾಗೂ ಶಿರಸಿಯ ಇಬ್ಬರನ್ನು ರಕ್ಷಣೆ ಮಾಡಿರುವ ಘಟನೆ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಹಾಗೂ ಕುಟ್ಲೆ ಸಮುದ್ರದಲ್ಲಿ ಇಂದು ನಡೆದಿದೆ.
ಮಹಾರಾಷ್ಟ್ರದಿಂದ ಶಿವರಾತ್ರಿ ನಿಮಿತ್ತ ಗೋಕರ್ಣಕ್ಕೆ ಆಗಮಿಸಿದ್ದ 15 ಜನ ಪ್ರವಾಸಿಗರು ಶಿವ ದರ್ಶನಕ್ಕೂ ಮೊದಲು ಸಮುದ್ರ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ನೀರಿನಲ್ಲಿ ಈಜಾಡುತ್ತಿರುವಾಗ ಅಲೆಗಳಿಗೆ ಸಿಲುಕಿದ ಭೂಪೇಂದ್ರ ಸಿಂಗ್ (48) ಶಿವಸಿಂಗ್ ರಜಪೂತ್ (52), ಯುವರಾಜ್ (45), ಯೋಗೇಂದ್ರ ರಜಪೂತ್ (38) ಕೊಚ್ಚಿಹೋಗುತ್ತಿದ್ದರು.
ತಕ್ಷಣ ಈ ಬಗ್ಗೆ ತಿಳಿದ ಲೈಫ್ ಗಾರ್ಡ್ ಗಳಾದ ರಾಜು ಅಂಬಿಗ, ಮಾರುತಿ ವಿಶ್ವಾಸ್ , ಶೇಖರ್ ಎಂಬುವವರು ನಾಲ್ವರನ್ನು ರಕ್ಷಣೆ ಮಾಡಿದ್ದಾರೆ.
ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಶಿರಸಿಯ ಟಿಎಸ್ಎಸ್ ಆಸ್ಪತ್ರೆಯ ಎಂಟು ಜನ ಸಿಬ್ಬಂದಿಗಳು ಶಿವರಾತ್ರಿ ಪ್ರಯುಕ್ತ ಗೋಕರ್ಣಕ್ಕೆ ಶಿವನ ದರ್ಶನಕ್ಕೆ ಬಂದಿದ್ದು ದರ್ಶನ ಮುಗಿದನಂತರ ಕುಡ್ಲೆ ಬೀಚಿನಲ್ಲಿ ಈಜಲು ತೆರಳಿದ್ದಾರೆ.
ಅದರಲ್ಲಿ ಇಬ್ಬರು. ಸಂದೀಪ್ ನಾಯ್ಕ್ (21) ಗುರು ಎಂಕೆ (೨೧) ಲೈಫ್ ಗಾರ್ಡ್, ಸಿಬ್ಬಂದಿಗಳ ಸಲಹೆ ಧಿಕ್ಕರಿಸಿ ಸಮುದ್ರದ ಒಳಕ್ಕೆ ಹೋಗಿ ಸಮುದ್ರದ ಸುಳಿಗೆ ಸಿಲುಕಿದ್ದಾರೆ. ಅದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿ ಮತ್ತು ಮಿಸ್ಟಿಕ್ ಗೋಕರ್ಣ ಅಡ್ವೆಂಚರ್ ಸಿಬ್ಬಂದಿಗಳು ತಕ್ಷಣ ರಕ್ಷಣೆಗೆ ಧಾವಿಸಿ ಇಬ್ಬರು ಪ್ರವಾಸಿಗರ ಜೀವ ರಕ್ಷಣೆ ಮಾಡಿದ್ದಾರೆ.