ರಾಷ್ಟ್ರ ಮಟ್ಟದಲ್ಲಿ 2 ದಿನಗಳ ಕಾಲ ಸಾಂಸ್ಕ್ರತಿಕ ಉತ್ಸವ : 2021 ಎಪ್ರಿಲ್ 02 ಮತ್ತು 03, ಯಕ್ಷಾಂಗಣ, ಗುಣವಂತೆ : ‘ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ’ ಹಾಗೂ ‘ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ’ ಘೋಷಣೆ

ಯಕ್ಷಗಾನ ಕುರಿತು ಸಮಗ್ರ ಅರಿವು, ವಿದ್ವತ್ತು, ಸೃಜನಶೀಲತೆಯಿಂದ ಮೆರೆದ ಮಂಡಳಿಯ ಹಿಂದಿನ ನಿರ್ದೇಶಕ ದಿ|| ಕೆರೆಮನೆ ಶಂಭು ಹೆಗಡೆ ಯಕ್ಷಗಾನ ರಂಗಭೂಮಿಗೆ ನೀಡಿದ ಕೊಡುಗೆ ಅನನ್ಯ .ಸಂಘಟಕರಾಗಿ, ಕಲಾವಿದರಾಗಿ, ಚಿಂತಕರಾಗಿ, ಕಲೆಯ ಶುದ್ಧ ಹಾಗೂ ಸೌಂದರ್ಯದ ಪ್ರತೀಕವಾಗಿ ಬದುಕಿದರು. ಯಕ್ಷಗಾನಕ್ಕಾಗಿ ತನ್ನ ಬದುಕನ್ನು ಸಮರ್ಪಿಸಿಕೊಂಡು ಅದರ ವಿಸ್ತಾರಕ್ಕೆ ದುಡಿದರು. ದೇಶ ವಿದೇಶಗಳಲ್ಲಿ ಕಲೆಯನ್ನು ಮೆರೆಸಿ, ರಾಜ್ಯ, ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿ ಯಕ್ಷಗಾನ ತರಬೇತಿ ಕೇಂದ್ರ ರಂಗಮಂದಿರ ನಿರ್ಮಿಸಿದರು. ಇಂತಹ ಮೇರು ನಟನ ನೆನಪಿನಲ್ಲಿ ಮಂಡಳಿ ಕಳೆದ ಹನ್ನೊಂದು ವರುಷಗಳಿಂದ ರಾಷ್ಟ್ರೀಯ ನಾಟ್ಯೋತ್ಸವನ್ನು ಆಚರಿಸುತ್ತಾ ಬಂದಿದೆ.

ಈ ವರ್ಷದ “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-12” ಬರುವ 2021 ಎಪ್ರಿಲ್ 2 ಮತ್ತು 3 ರಂದು ಹೊನ್ನಾವರ ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ಜರುಗಲಿದೆ. ಈ ನಾಟ್ಯೋತ್ಸವದಲ್ಲಿ ದೇಶದ ಶ್ರೇಷ್ಠ ಕಲಾ ಪರಿಣ ತರು, ಚಿಂತಕರು, ಭಾಗವಹಿಸಲಿದ್ದಾರೆ. ಸಂಗೀತ, ನೃತ್ಯ, ಜಾನಪದ ಮುಂತಾದ ವಿವಿಧ ಪ್ರಕಾರಗಳ ವಿಶಿಷ್ಟ ಕಲಾತಂಡಗಳು, ಭಾಗವಹಿಸುವ ಈ ನಾಟ್ಯೋತ್ಸವದಲ್ಲಿ ಕಲಾವಿದರಿಗೆ ಸನ್ಮಾನ, ವಿಚಾರ ಗೋಷ್ಠಿ, ನೃತ್ಯ, ಪ್ರಾತ್ಯಕ್ಷಿಕೆ ಮುಂತಾದವು ನಡೆಯಲಿದೆ.

ಈ ಸಂದರ್ಭದಲ್ಲಿ ಮಂಡಳಿ ಪ್ರತಿ ವರ್ಷವೂ ನೀಡುವ ಅತ್ಯುನ್ನತ ಪ್ರಶಸ್ತಿಗಳಾದ ‘ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ’ ಹಾಗೂ ‘ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ. ಖ್ಯಾತ ವೃತ್ತಿರಂಗಭೂಮಿಯ ಕಲಾವಿದೆ ಬಿ.ಜಯಶ್ರೀ ಹಾಗೂ ಸುಬ್ರಾಯ ಈಶ್ವರ ಹೆಗಡೆ ಕಪ್ಪೆಕೆರೆ, ಹಡಿನಬಾಳ ಇವರಿಗೆ ಈ ಪ್ರಶಸ್ತಿ ನೀಡಲಾಗುವುದು ಎಂದು ನಾಟ್ಯೋತ್ಸವ ಸಮಿತಿಯ ಕಾರ್ಯಧ್ಯಕರಾದ ಶ್ರೀ ಲಕ್ಷ್ಮೀನಾರಾಯಣ ಕಾಶಿ, ಶಿವಮೊಗ್ಗ ಹಾಗೂ                                              ನಿರ್ದೇಶಕರಾದ ಕೆರೆಮನೆ ಶಿವಾನಂದ ಹೆಗಡೆ ಈ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಯಕ್ಷಗಾನದ ಮೇರುನಟ ಕೆರೆಮನೆ ಶಿವರಾಮ ಹೆಗಡೆಯವರ ಹೆಸರಿನಲ್ಲಿ ಸ್ಥಾಪಿತವಾದ “ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ” ಖ್ಯಾತ ರಂಗಭೂಮಿ ಕಲಾವಿದರು, ನಿರ್ದೇಶಕರು ಹಾಗೂ ರಾಜ್ಯಸಭಾ ಮಾಜಿ ಸದಸ್ಯರು ಆದ ಪದ್ಮಶ್ರೀ ಡಾ. ಬಿ. ಜಯಶ್ರೀ ಇವರಿಗೆ ಘೋಷಣೆ ಮಾಡಲಾಗಿದೆ.

RELATED ARTICLES  ಆಝಾದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯರೇ ಅಲ್ಲಾ. ಅಂಗೈ ಹುಣ್ಣಿಗೆ ಕನ್ನಡಿ ಏಕೆ?  ವಕ್ಸ ಬೋರ್ಡ ಬಿ.ಜೆ.ಪಿ. ಕೊಡುಗೆ ಜಗದೀಪ :

ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾ ಮಾಧ್ಯಮದಲ್ಲಿ ಕಲಾವಿದೆಯಾಗಿ, ನಿರ್ದೇಶಕಿಯಾಗಿ ಮತ್ತು ಪ್ರಸಿದ್ಧ ಗಾಯಕರೂ ಆಗಿ ಭಾರತೀಯ ಕಲೆಗೆ ಅನನ್ಯ ಕೊಡುಗೆಯನ್ನು ನೀಡಿರುವ ಪದ್ಮಶ್ರೀ ಡಾ. ಬಿ. ಜಯಶ್ರೀ, ಬೆಂಗಳೂರು ಇವರಿಗೆ 2020 ರ ಪ್ರತಿಷ್ಠಿತ ‘ಕೆರೆಮನೆ ಶಿವರಾಮ ಹೆಗಡೆ ರಾಷ್ಠ್ರೀಯ ಪ್ರಶಸ್ತಿ’ಯನ್ನು ನೀಡಲು ಮ0ಡಳಿ ಹಾಗೂ ನಾಟ್ಯೋತ್ಸವ ಸಲಹಾ ಸಮಿತಿ ಮತ್ತು ಪ್ರಶಸ್ತಿ ಆಯ್ಕೆ ಸಮಿತಿ ನಿರ್ಧರಿಸಿದೆ. ಈ ಪ್ರಶಸ್ತಿ ರೂ. 25,000/- (ಇಪ್ಪತ್ತೈದು ಸಾವಿರ ರೂಪಾಯಿ) ಮೊತ್ತ, ಪ್ರಶಸ್ತಿ ಪತ್ರ ಮತ್ತು ಇತರ ಗೌರವಗಳನ್ನು ಒಳಗೊಂಡಿದೆ.

ಈ ಪ್ರಶಸ್ತಿ ಕಲೆ, ಸಂಸ್ಕೃತಿ, ಸಾಹಿತ್ಯ ಹೀಗೆ ಸಕಲ ಕಲಾಕ್ಷೇತ್ರಕ್ಕೆ ವಿಸ್ತಾರಗೊಂಡಿದ್ದು, 2004 ರಲ್ಲಿ ಸ್ಥಾಪನೆಯಾಗಿ ಮೊದಲ ಪ್ರಶಸ್ತಿ ಗುರು ಡಾ. ಶ್ರೀಮತಿ ಮಾಯಾರಾವ್ ನಟರಾಜನ್, ಬೆಂಗಳೂರು (ಶಾಸ್ತ್ರೀಯ ನೃತ್ಯ) ಇವರಿಗೆ, ನಂತರ 2005 ರ ಪ್ರಶಸ್ತಿಯನ್ನು ಶ್ರೀ ನೆಬ್ಬೂರು ನಾರಾಯಣ ಭಾಗವತ (ಯಕ್ಷಗಾನ) ಇವರಿಗೆ, 2006 ರ ಪ್ರಶಸ್ತಿ ಖ್ಯಾತರಂಗ ನಟ ಶ್ರೀ ಏಣಗಿ ಬಾಳಪ್ಪ ಇವರಿಗೆ, 2007 ರ ಪ್ರಶಸ್ತಿ ಪದ್ಮವಿಭೂಷಣ ಡಾ. ಗಂಗೂಬಾಯಿ ಹಾನಗಲ್ (ಸಂಗೀತ), 2008 ರ ಪ್ರಶಸ್ತಿಯನ್ನು ಶ್ರೀ ಕೆ.ಎಸ್. ನಾರಾಯಣ ಆಚಾರ್ಯ, ಮೈಸೂರು (ಸಾಹಿತ್ಯ), 2009 ರ ಪ್ರಶಸ್ತಿಯನ್ನು ಶ್ರೀ ಹೊಸ್ತೋಟ ಮಂಜುನಾಥ ಭಾಗ್ವತ್, ಸಿರಸಿ (ಯಕ್ಷಗಾನ), 2010 ರ ಪ್ರಶಸ್ತಿಯನ್ನು ಶ್ರೀ ಸಂತ ಭದ್ರಗಿರಿ ಅಚ್ಯುತದಾಸ, ಬೆಂಗಳೂರು (ಹರಿಕಥಾ ವಿದ್ವಾಂಸರು), 2011 ರ ಪ್ರಶಸ್ತಿಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಡಾ. ಯು.ಆರ್.ಅನಂತಮೂರ್ತಿ, ಬೆಂಗಳೂರು, 2012 ರ ಪ್ರಶಸ್ತಿಯನ್ನ ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಶ್ರೀ ಕೆ. ಗೋವಿಂದ ಭಟ್ಟ, 2013 ರ ಪ್ರಶಸ್ತಿಯನ್ನು ಬಡಗುತಿಟ್ಟಿನ ಯಕ್ಷಗಾನ ಕಲಾವಿದ ಪದ್ಮಶ್ರೀ ಶ್ರೀ ಚಿಟ್ಟಾಣ  ರಾಮಚಂದ್ರ ಹೆಗಡೆ, 2014 ರ ಪ್ರಶಸ್ತಿಯನ್ನ ಪದ್ಮಶ್ರೀ ಪುರಸ್ಕೃತ ಶ್ರೀ ಸುರಭಿ ನಾಗೇಶ್ವರ ರಾವ್, ಹೈದ್ರಾಬಾದ್, 2015 ರ ಪ್ರಶಸ್ತಿ ದೆಹಲಿಯ ಸ್ಪಿಕ್ ಮೆಕೆ ಸಂಸ್ಥೆ, 2016 ರ ಪ್ರಶಸ್ತಿಯನ್ನು ಮೇಲಟ್ಟೂರಿನ ಕಲೈಮಾಮಣ  ಎಸ್. ನಟರಾಜ, ತಮಿಳುನಾಡು ಹಾಗೂ 2017ರ ಪ್ರಶಸ್ತಿಯನ್ನು ಕರ್ಕಿಯ ಹಾಸ್ಯಗಾರ ಮೇಳಕ್ಕೆ, 2018 ರ ಪ್ರಶಸ್ತಿ ನೀನಾಸಂನ ಹೆಗ್ಗೋಡು ಸಂಸ್ಥೆಗೆ ಹಾಗೂ 2019ರಲ್ಲಿ ಪದ್ಮಭೂಷಣ ಡಾ. ಪದ್ಮಸುಬ್ರಹ್ಮಣ್ಯ, ಚೆನ್ನೈ ಇವರಿಗೆ ನೀಡಲಾಗಿದೆ.

RELATED ARTICLES  ಸಾರ್ವಜನಿಕ ಸ್ಥಳದಲ್ಲಿ ಅಗ್ನಿ ಅವಘಡ

2021 ಎಪ್ರಿಲ್ 2 ಮತ್ತು 3 ರಂದು ಗುಣವಂತೆ ಯಕ್ಷಾಂಗಣದಲ್ಲಿ ನಡೆಯಲಿರುವ ಎರಡು ದಿನಗಳ ‘ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ದ ಸಂದರ್ಭದಲ್ಲಿ ದಿ: 2-04-2021 ರಂದು ಆಗಮಿಸುವ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಯಕ್ಷಗಾನದ ಸರ್ವ ಸಮರ್ಥ ಕಲಾವಿದ ಕೆರೆಮನೆ ಗಜಾನನ ಹೆಗಡೆ ಹೆಸರಿನಲ್ಲಿ ಸ್ಥಾಪಿತವಾದ “ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ” ಯಕ್ಷಗಾನದ ಹಿರಿಯ ಭಾಗವತರಾದ ಶ್ರೀ ಸುಬ್ರಾಯ ಭಾಗವತ ಕಪ್ಪೆಕೆರೆ ಇವರಿಗೆ ಘೋಷಣೆ.

ಮಂಡಳಿಯ ಸರ್ವಸಮರ್ಥ ಯಕ್ಷಗಾನ ಕಲಾವಿದ ಖ್ಯಾತ ಸ್ತ್ರೀ ವೇಷಧಾರಿಯಾಗಿ ಮಿಂಚಿ ಮರೆಯಾದ, ಶ್ರೀ ಕೆರೆಮನೆ ಶಿವರಾಮ ಹೆಗಡೆಯವರ ಕಿರಿಯ ಪುತ್ರ ಶ್ರೀ ಕೆರೆಮನೆ ಗಜಾನನ ಹೆಗಡೆ ಇವರ ಹೆಸರಿನಲ್ಲಿ ಕಳೆದ 8 ವರುಷದಿಂದ (2012) ಯಕ್ಷಗಾನ ಕ್ಷೇತ್ರಕ್ಕೆ ಮೀಸಲಾದ ಪ್ರಶಸ್ತಿಯನ್ನು ಘೋಷಿಸಲಾಗುತ್ತಿದೆ. ಈ ಪ್ರಶಸ್ತಿಯು ರೂ 15,000 (ಹದಿನೈದು ಸಾವಿರ ಮಾತ್ರ) ನಗದು, ಪ್ರಶಸ್ತಿ ಪತ್ರ, ಶಾಲು ಇತ್ಯಾದಿ ಗೌರವಗಳನ್ನು ಹೊಂದಿದೆ.

2012ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಯನ್ನು ಮೊದಲು ಡಾ. ಕೊಳ್ಯೂರು ರಾಮಚಂದ್ರ ರಾವ್ (2012), ಶ್ರೀ ಕುಂಜಾಲು ರಾಮಕೃಷ್ಣ ನಾಯಕ (2013), ಶ್ರೀ ಪ್ರಭಾಕರ ಭಂಡಾರಿ, ಕರ್ಕಿ (2014), ಶ್ರೀ ಪಾತಾಳ ವೆಂಕಟ್ರಮಣ ಭಟ್, ಉಪ್ಪಿನಂಗಡಿ (2015) ಶ್ರೀ ಗೋವಿಂದ ಶೇರಿಗಾರ ಮಾರ್ಗೋಳಿ (2016) ಹಾಗೂ ಶ್ರೀ ಗೋಡೆ ನಾರಾಯಣ ಹೆಗಡೆ (2017), ಶ್ರೀ ತಿಮ್ಮಣ್ಣ ಯಾಜಿ ಮಣ್ಣಿಗೆ (2018) ಹಾಗೂ ಶ್ರೀ ಕೃಷ್ಣ ಯಾಜಿ ಇಡಗುಂಜಿ (2019) ಇವರಿಗೆ ನೀಡಲಾಗಿದೆ, 2020ರ ಈ ಪ್ರಶಸ್ತಿಯನ್ನು ಮಂಡಳಿ ಯಕ್ಷಗಾನದ ಮೇರು ಭಾಗವತಾರಾದ ಶ್ರೀ ಸುಬ್ರಾಯ ಭಾಗವತ ಕಪ್ಪೆಕೆರೆ ಇವರಿಗೆ ನೀಡಲಿದೆ. ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ದಿ: 3-04-2021 ರಂದು ಆಗಮಿಸುವ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನೆರವೇರಲಿದೆ.