ಶಿರಸಿ: ಅಘನಾಶಿನಿ ನದಿ ಹಾಗೂ ಅದರ ತಟದ ಜೀವ ವೈವಿಧ್ಯತೆ ಸಂರಕ್ಷಣೆ ಕುರಿತು ಜಿಲ್ಲೆಯ ಯುವಕರ ತಂಡವೊಂದು ನಿರ್ಮಿಸಿರುವ ಅಪರೂಪದ ಸಾಕ್ಷ್ಯಚಿತ್ರ ಇಂದು ಸಂಜೆ 4 ಗಂಟೆಗೆ ನಗರದ ಎಂ ಇ ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ತೆರೆಕಾಣಲಿದೆ.
ಹಲವು ವಿಶೇಷ ಕಥೆಗಳನ್ನು ಆಯ್ದುಕೊಂಡು ನದಿಯ ನಿರೂಪಣೆಯಲ್ಲೇ `ಅಘನಾಶಿನಿ ಸಾಕ್ಷ್ಯಚಿತ್ರ ಮೂಡಿಬಂದಿದೆ
41 ನಿಮಿಷಗಳ ಸಾಕ್ಷ್ಯಚಿತ್ರವು ಘಟ್ಟದ ಮೇಲಿನ ಮತ್ತು ಘಟ್ಟದ ಕೆಳಗಿನ ಜನರ ಜನಜೀವನ ಹೊಂದಿಸುವ ಸಂಬಂಧವನ್ನು ನವಿರಾಗಿ ಕಟ್ಟಿಕೊಡುತ್ತದೆ. ನದಿ ಕಣಿವೆಯ ದೇವರ ಕಾಡು, ರಾಮಪತ್ರೆ ಜಡ್ಡಿ, ಸಿಂಗಳೀಕ ಪ್ರಪಂಚ, ಹೊಳೆಯುವ ಶಿಲೀಂದ್ರ, ಲವಣಯುಕ್ತ ನೀರಿನಲ್ಲಿ ಬೆಳೆಯುವ ಅಪರೂಪದ ಕಗ್ಗ ಭತ್ತ, ನರ್ತನ ಕಪ್ಪೆಗಳ ಜೀವನ ಕಥೆ, ಅಳಿವೆಯ ಬಳಚಿನ ಶ್ರೀಮಂತಿಕೆ ಸೇರಿದಂತೆ ಹಲವು ವಿಶೇಷಗಳಿಂದ ಕೂಡಿರುವ ಅಘನಾಶಿನಿ ಸಾಕ್ಷ್ಯಚಿತ್ರದಲ್ಲಿ ಜಗತ್ತಿನಲ್ಲಿ ಕೆಲವೇ ಸ್ಥಳಗಳಲ್ಲಿ ಸಂಭವಿಸುವ ಚಂದ್ರಧನುಷ್‍ಅನ್ನು ಸೆರೆಹಿಡಿದು ನೀಡಿದ್ದೂ ಏಷ್ಯಾದಲ್ಲೇ ಪ್ರಥಮ ಎನಿಸಿಕೊಂಡಿದೆ.
ಈವರೆಗೆ ಆದ ಸಂಶೋಧನೆಗಳ ಮೆಲುಕು, ಇತಿಹಾಸ ಸೇರಿದಂತೆ ಇಡೀ ನದಿ ಕಣಿವೆಯ ವೈವಿಧ್ಯತೆಯ ಚಿತ್ರಣವನ್ನು ಸಾಕ್ಷ್ಯಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಇರುವ ಒಳ್ಳೆಯ ಸಂಗತಿಗಳನ್ನು ತೋರುವ ಜೊತೆಗೆ ನಾವು ಮಾಡಿರುವ ಹಾನಿಯ ಬಗ್ಗೆ ಮನವರಿಕೆ ಮಾಡುವ ಕಾರ್ಯವಾಗಿದೆ. ಸಿಂಗಳಿಕ ಜೇನು ತೆಗೆಯುವ ಹಾಗೂ ಚಂದ್ರಧನುಷ್‍ನಂತಹ ಅಪರೂಪದ ದೃಷ್ಯ ತುಣುಕುಗಳು ಇದರಲ್ಲಿ ಅಡಕವಾಗಿದ್ದು, ಸರ್ವರಿಗೂ ಮುಕ್ತ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.