ಕಾರವಾರ: ವಾಹನದಲ್ಲಿ ಓಡಾಡುವ ಜನರ ಬಳಿಯಿರುವ ಹಣ, ಬಂಗಾರದ ಆಭರಣಗಳು ಹಾಗು ಮೊಬೈಲ್ ಗಳನ್ನು ದರೋಡೆ ಮಾಡುವ ಉದ್ಧೇಶದಿಂದ ಇದ್ದ ಕಳ್ಳರ ಜಾಲವನ್ನು ಕಾರವಾರ ಪೊಲೀಸರು ಬೇಧಿಸಿದ್ದು, ಓರ್ವನನ್ನು ಬಂಧಿಸಿದ್ದಾರೆ. ಇನ್ನು ಆರು ಜನರು ತಪ್ಪಿಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ತಾಲೂಕಿನ ಹಲವೆಡೆ ಹೆದ್ದಾರಿಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಹೆದರಿಸಿ, ದರೋಡೆ ಮಾಡುತ್ತಿದ್ದವರನ್ನು ಪೊಲೀಸರು ಹೆಡೆಮುರಿ ಕಟ್ಟಿದಂತಾಗಿದೆ.

ಬಂಧಿತ ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಳಿಯೂರ ನಿವಾಸಿ ಆಸಿಫ್ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಸೇರಿದಂತೆ ಏಳು ಜನರ ತಂಡ ವನ್ನು ರಚಿಸಿಕೊಂಡು ಕಾರಿನಲ್ಲಿ ಶಿಕಾರಿಪುರದಿಂದ ಕಾರವಾರಕ್ಕೆ ಬಂದಿದ್ದ. ಬಳಿಕ ಕಾರವಾರ ಹಾಗು ಗೋವಾ ಕಡೆಗಳಲ್ಲಿ ರಾತ್ರಿ ವೇಳೆ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರ ವಾಹನ ತಡೆದು ದರೋಡೆಗೆ ಸಂಚು ರೂಪಿಸಿದ್ದರು. ಇವರು ದರೋಡೆ ಮಾತ್ರವಲ್ಲ, ಜಾತ್ರೆ ಸಂತೆಯಂತಹ ಜನಸಂದಣಿ ಪ್ರದೇಶದಲ್ಲಿ ಮೊಬೈಲ್ ಸಹ ಕಳ್ಳತನ ಮಾಡುತ್ತುದ್ದರು ಎಂದು ತಿಳಿದುಬಂದಿದೆ.

RELATED ARTICLES  ಉಡುಪಿಯಲ್ಲಿ ಇಂದಿನಿಂದ ಮೂರು ದಿವಸ ಆಯೋಜಿಸಿರುವ ಧರ್ಮ ಸಂಸದ್​​ಗೆ ಚಾಲನೆ.

ಶಿಕಾರಿಪುರದಿಂದ ಕಾರವಾರಕ್ಕೆ ಬಂದಿದ್ದ ತಂಡ ಕಾರವಾರದ ಬೈತಖೋಲ್ ನ ಸಿದ್ದರಾಮೇಶ್ವರ ಮಠದ ಬಳಿಕ ಹೆದ್ದಾರಿಯಲ್ಲಿ ದರೋಡೆ ಮಾಡಲು ನಿಂತಿದ್ದರು. ತಮ್ಮ ಬಳಿ ಖಾರದಪುಡಿ, ದೊಣ್ಣೆ, ನೈಲಾನ್ ಹಗ್ಗ ಸೇರಿದಂತೆ ಹಲವು ಮಾರಕಾಸ್ತ್ರಗಳನ್ನು ಹಿಡಿದಿದ್ದರು. ಈ ವೇಳೆ ಪೊಲೀಸರು ದಾಳಿ ನಡೆಸಿದ್ದು, ಓರ್ವನನ್ನು ಬಂಧಿಸಿದ್ದಾರೆ. ಇನ್ನುಳಿದ ಆರು ಮಂದಿ ಪರಾರಿಯಾಗಿದ್ದಾರೆ.

RELATED ARTICLES  ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣ ಅವಶ್ಯಕ-ಜಿ.ಎಸ್.ನಟೇಶ

ಇತ್ತಿಚೆಗೆ ವಾರದ ಸಂತೆ, ಜಾತ್ರೆಗಳಲ್ಲಿ ಮೊಬೈಲ್ ಕಳ್ಳತನ ಹೆಚ್ಚಿತ್ತು. ಕಳೆದೆರಡು ದಿನಗಳ ಹಿಂದೆ ಹೊನ್ನಾವರದಲ್ಲಿ ನಡೆದ ಸಂತೆಯಲ್ಲಿ ಕಳ್ಳರು 9 ಮೊಬೈಲ್ ಫೋನ್ ಗಳನ್ನು ಎಗರಿಸಿದ್ದರು. ಈ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿತ್ತು. ಹೀಗಾಗಿ ಪೊಲೀಸರು ಇದರ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು.