ಯಲ್ಲಾಪುರ: ಎರಡು ಲಾರಿಗಳು ಹಾಗೂ ಬೊಲೆರೋ ನಡುವೆ ಅಪಘಾತ ಸಂಭವಿಸಿ ಈರ್ವರು ಮಹಿಳೆಯರು ಸಾವನ್ನಪ್ಪಿದ್ದು, ಮಕ್ಕಳು ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಯಲ್ಲಾಪುರದಲ್ಲಿ ನಡೆದಿದೆ.
ಹೊಸ ಬೊಲೆರೊ ಖರೀದಿಸಿದ್ದ ಕಾರಣ ಬಾಗಲಕೋಟ ಮೂಲದ ಎಂಟು ಮಂದಿ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದರು. ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟದಲ್ಲಿ ಲಾರಿಯೊಂದು ಚಾಲಕನ ನಿಯಂತ್ರಣಕ್ಕೆ ಸಿಗದೆ ತಿರುವಿನಲ್ಲಿ ಧರ್ಮಸ್ಥಳಕ್ಕೆ ಹೊರಟಿದ್ದವರ ಬೊಲೆರೊಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಮುಂದೆ ದೂಕಿದೆ. ಈ ವೇಳೆ ಎದುರು ಬರುತ್ತಿದ್ದ ಟಿಪ್ಪರ್ ಗೆ ಬೊಲೆರೊ ಡಿಕ್ಕಿಯಾಗಿದೆ. ಟಿಪ್ಪರ್ ಹಾಗೂ ಲಾರಿಯ ನಡುವೆ ಸಿಕ್ಕಿ ಬೊಲೆರೊ ಅಪ್ಪಚ್ಚಿಯಾಗಿದ್ದು, ಸ್ಥಳದಲ್ಲೇ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಬಿದರಿಯ ರಾಜೇಶ್ವರಿ ಪರಡ್ಡಿ (35) ಮೃತಪಟ್ಟಿದ್ದಾರೆ.
ಇನ್ನುಳಿದ ಚಿಕ್ಕಮ್ಮ ಪಾಟೀಲ (28), ತಿಮ್ಮನ ಗೌಡ, ಹನುಮಂತ, ಲಕ್ಷ್ಮೀ, ಶ್ರುತಿ, ಮಕ್ಕಳಾದ ಆಕಾಶ್ ಹಾಗೂ ಅಪೇಕ್ಷಾ ಅವರನ್ನು ಬೊಲೆರೊದಿಂದ ಹೊರ ತೆಗೆದ ಸ್ಥಳೀಯರು ಹಾಗೂ ಪೊಲೀಸರು ಕೂಡಲೇ ತಾಲೂಕು ಆಸ್ಪತ್ರೆಗೆ ಸಾಗಿಸಿದರಾದರೂ ಚಿಕ್ಕಮ್ಮ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಗಂಭೀರವಾಗಿ ಗಾಯಗೊಂಡಿರುವ ಆರು ಮಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.
ಅಪಘಾತದಿಂದ ಘಟ್ಟದಲ್ಲಿ ಕೆಲ ಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಸ್ಥಳಕ್ಕೆ ಪಿಐ ಸುರೇಶ್ ಯಳ್ಳೂರ್ ಹಾಗೂ ಪಿಎಸ್ಐ ಮಂಜುನಾಥ ಗೌಡರ ತೆರಳಿ ಪರಿಶೀಲನೆ ನಡೆಸಿ, ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.