ಅಂಕೋಲಾ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ರಸ್ತೆಯಂಚಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕನಿಗೆ ಪೆಟ್ಟಾದ ಘಟನೆ ವರದಿಯಾಗಿದೆ.
ಮಾಸ್ತಿಕಟ್ಟಾ ಬಳಿ ರಾ. ಹೆ. 63ರಲ್ಲಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ, ರಸ್ತೆಯಂಚಿನ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಬುಧವಾರ ನಡೆದಿದೆ. ಮಂಗಳೂರಿನಿಂದ ಧಾರವಾಡಕ್ಕೆ ಕೋಕ್ ತುಂಬಿ ಹೊರಟಿದ್ದ ಲಾರಿ, ದಾರಿ ಮಧ್ಯೆ ಅಂಕೋಲಾ- ಹುಬ್ಬಳ್ಳಿ ಹೆದ್ದಾರಿಯಲ್ಲಿ ಅಪಘಾತಕ್ಕೆ ಈಡಾಗಿದೆ.
ಲಾರಿ ಮರಕ್ಕೆ ಜೋರಾಗಿ ಗುದ್ದಿದ ಪರಿಣಾಮ ಲಾರಿಯ ಮುಂಭಾಗ ಸಂಪೂರ್ಣ ನುಜ್ಜು ಗೊಂಡು, ಲಾರಿಯಲ್ಲಿ ಸಿಲುಕಿದ್ದ ಚಾಲಕನನ್ನು ಹೊರತೆಗೆಯಲು ತಾಸಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಬೇಕಾಯಿತು. ಪಿ. ಎಸ್.ಐ ಸಿ ಸಂಪತ್ ಮತ್ತು ಪೊಲೀಸ್ ಸಿಬ್ಬಂದಿಗಳು ಸೇರಿ, ಅಗ್ನಿಶಾಮಕ ಹಾಗೂ ಅಂಬ್ಯುಲೆನ್ಸ ಸಿಬ್ಬಂದಿಗಳು ಹಾಗೂ ಸ್ಥಳೀಯರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.
ಚಾಲಕನ ಕಾಲಿಗೆ ಪೆಟ್ಟಾಗಿ ತೀವ್ರ ರಕ್ತ ಸ್ರಾವವಾಗಿದೆ. ಕ್ಲೀನರಗೂ ಚಿಕ್ಕಪುಟ್ಟ ಗಾಯಗಳಾಗಿದ್ದು ಇಬ್ಬರನ್ನೂ ತಾಲೂಕಾ ಸರ್ಕಾರಿ ಆಸ್ಪ್ರತ್ರೆಗೆ ದಾಖಲಿಸಲಾಗಿದೆ.