ಶಿರಸಿ: ಕುಡಿಯುವ ನೀರಿನ ಬವಣೆ ಕಡಿಮೆ ಮಾಡಲು ಗಿಡಮರಗಳ ಪೋಷಣೆ ಆಗಬೇಕು. ಅದರ ಬದಲು ವೈಜ್ಞಾನಿಕ ಕಾರಣಗಳನ್ನು ಇಟ್ಟುಕೊಂಡು ನದಿ ಜೋಡಣೆಗಳ ಯೋಜನೆಯನ್ನು ಪ್ರಬಲವಾಗಿ ವಿರೋಧಿಸಬೇಕು ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಬೇಡ್ತಿ ಹಾಗೂ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಇಲ್ಲಿನ ಟಿಆರ್‍ಸಿ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಬೇಡ್ತಿ, ಅಘನಾಶಿನಿ-ವರದಾ ನದಿ ಜೋಡಣೆ ಯೋಜನೆಗಳ ಸಾಧಕ-ಬಾಧಕಗಳ ಕುರಿತು ಸಮಾಲೋಚನಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಕೊರತೆ ತೀರಿಸಲು ನದಿ ಜೋಡಣೆಯೇ ಶಾಶ್ವತ ಪರಿಹಾರವಲ್ಲ. ತಕ್ಷಣದ ಪರಿಹಾರದ ಬಗ್ಗೆ ಮಾತ್ರ ಆಲೋಚನೆ ಮಾಡಬಾರದು. ದೂರದೃಷ್ಟಿ ಇರಬೇಕು ಎಂದರು. ಬಯಲುಸೀಮೆಗೆ ನೀರು ಕೊಡಬೇಡಿ ಎಂದು ಹೇಳುತ್ತಿಲ್ಲ. ವೈಜ್ಞಾನಿಕ ಚಿಂತನೆಯೊಂದಿಗೆ ಸರ್ಕಾರ ಸಾಗಲಿ. ಅದು ಸಾಧ್ಯವಾಗದಿದ್ದರೆ ಹೋರಾಟ ಅನಿವಾರ್ಯವಾಗಿದೆ. ಆದರೆ ಇದು ವಿರೋಧಿಸುವ ಸಮಾವೇಶವಲ್ಲ, ಸಮಾಲೋಚನಾ ಕಾರ್ಯಾಗಾರ ಎಂದರು.
ಪರಿಸರ ತಜ್ಞ ಟಿ.ವಿ.ರಾಮಚಂದ್ರ, ಸಂಪನ್ಮೂಲ ದೋಚುವ ಯೋಜನೆ ಬಗ್ಗೆ ವಿರೋಧಿಸಿದರೆ ಅಪರಾಧಿ ಎಂಬಂತೆ ಬಿಂಬಿಸಲಾಗುತ್ತದೆ. ಪ್ರತಿ ಜೀವಿಗೂ ಕೆಲಸ, ಆಹಾರ ಕೊಡುವ ಶಕ್ತಿ ಪ್ರಕೃತಿಗಿದೆ. ಅದನ್ನು ಕಸಿಯುವ ಅಧಿಕಾರ ಯಾವ ಸರ್ಕಾರಕ್ಕೂ ಇಲ್ಲ. ಜಿಲ್ಲೆಯ ಕಾಡಿನಿಂದ ವರ್ಷಕ್ಕೆ 9 ರಿಂದ 15 ಸಾವಿರ ಕೋಟಿ ಆದಾಯವಿದೆ ಎಂದರು.
ದಿಕ್ಸೂಚಿ ಭಾಷಣ ಮಾಡಿದ ವಿಜ್ಞಾನ ಲೇಖಕ ನಾಗೇಶ ಹೆಗಡೆ, ಜಗತ್ತಿಗೆ ಪಶ್ಚಿಮ ಘಟ್ಟ ಅಮೂಲ್ಯ ಸಂಪತ್ತು. ಅದರ ರಕ್ಷಣೆಯ ಹೊಣೆ ನಮ್ಮದ್ದೇ ಆಗಿರುತ್ತದೆ. ಬಾಯಾರಿದವರಿಗೆ ನೀರು ನೀಡುವುದು ಧರ್ಮ. ದಾಹ ಇದ್ದವರಿಗೆ ನೀರು ಕೊಡುವುದು ಅಧರ್ಮ. ಪಶ್ಚಿಮ ಘಟ್ಟ ದೇಶಕ್ಕೆ ಗಂಗಾಧರ ಇದ್ದಂತೆ. ಇಲ್ಲಿ ನೀರು ಶೇಖರಣೆಯಾದರೆ ತೆಲಂಗಾಣ, ಉತ್ತರ ಭಾರತದಲ್ಲಿ ಶುದ್ಧಗಾಳಿ ಸಿಗುತ್ತದೆ. ಪ್ರತಿಯೊಬ್ಬರೂ ಗಂಗಾಧರರಾಗಿ ಎಂದರು.
ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ನದಿ ತಿರುವು ಯೋಜನೆಯಿಂದ ಪಶ್ಚಿಮ ಘಟ್ಟದಲ್ಲಿ ಭೂ ಕುಸಿತದ ಯೋಜನೆ ಹೆಚ್ಚಲಿದೆ. ಈ ಬಗ್ಗೆ ತಜ್ಞರು ಹಿಂದೆಯೇ ವರದಿ ನೀಡಿದ್ದಾರೆ. ಹೀಗಾಗಿ, ಸರ್ಕಾರ ಈ ಯೋಜನೆಯನ್ನು ಮರು ಪರಿಶೀಲಿಸಲಿ ಎಂದರು.
ಕೇಶವ ಕೊರ್ಸೆ ಮಾತನಾಡಿ, ವೈಜ್ಞಾನಿಕ ಚಿಂತನೆ ಆಧಾರದಲ್ಲಿ ಜನಾಭಿಪ್ರಾಯ ಸಂಗ್ರಹಿಸಲಾಗುವುದು. ಉದ್ದೇಶಿತ ಈ ಯೋಜನೆಯೂ ಎತ್ತಿನ ಹೊಳೆಗೆ ಸಮನಾಗಿದೆ. ಸಮಾಲೋಚನೆ ಆಗಬೇಕು ಎಂದರು. ವಿ.ಎನ್.ಹೆಗಡೆ ಬೊಮ್ನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮಧುಮತಿ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಸಮಾಲೋಚನೆಯಲ್ಲಿ ಕೈಗೊಂಡ ನಿರ್ಣಯಗಳು:
ಕಾರ್ಯಾಗಾರದಲ್ಲಿ ನದಿ ಜೋಡಣೆ ಯೋಜನೆ ಕೈಬಿಡುವಂತೆ ಹಕ್ಕೊತ್ತಾಯ ಮಾಡಿ ನಿರ್ಣಯ ಸ್ವೀಕರಿಸಲಾಯಿತು. ಸ್ವರ್ಣವಲ್ಲೀ ಶ್ರೀಗಳ ಸಾನ್ನಿಧ್ಯದಲ್ಲಿ ಸಂಘಟಕ ನಾರಾಯಣ ಹೆಗಡೆ ಗಡೀಕೈ ನಿರ್ಣಯ ಮಂಡಿಸಿದರು.
* ರಾಜ್ಯ ನೀರಾವರಿ ಇಲಾಖೆ ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಕುರಿತು ಯೋಜನಾ ವರದಿ ತಯಾರಿಸಲು ಕೇಂದ್ರ ಸರ್ಕಾರದ ಎನ್.ಡಬ್ಲ್ಯು.ಡಿ.ಎ.ಗೆ ನೀಡಿರುವ ಆದೇಶವನ್ನು ರದ್ದುಪಡಿಸಬೇಕು. ಸ್ಥಳ ಸಮೀಕ್ಷೆಗೆ ಅವಕಾಶ ನೀಡಬಾರದು.
* ಪಶ್ಚಿಮಘಟ್ಟದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ದಿಕ್ಕು ತಿರುಗಿಸುವ ಕುರಿತು ಅಧ್ಯಯನ ಮಾಡಲು ರಾಜ್ಯ ನೀರಾವರಿ ಇಲಾಖೆ ಎನ್.ಡಬ್ಲ್ಯು.ಡಿ.ಎ.ಗೆನೀಡಿರುವ ಆದೇಶ ಹಿಂಪಡೆಯುವ ಜತೆ ರದ್ದುಪಡಿಸಬೇಕು.
* ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗೆ ನಿಯೋಗದ ಮೂಲಕ ಹಕ್ಕೊತ್ತಾಯದ ಮನವಿ ಸಲ್ಲಿಸಬೇಕು.ವಿಧಾನಸಭಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ನೇತೃತ್ವದಲ್ಲಿ ಈ ನಿಯೋಗ ಒಯ್ಯಲು ದಿನಾಂಕ ನಿಶ್ಚಯಿಸಬೇಕು.
* ಜಿಲ್ಲೆಯ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳು, ಗ್ರಾಮ ಪಂಚಾಯಿತಿಗಳು ಈ ಯೋಜನೆ ಪ್ರಸ್ತಾವನೆಯನ್ನು ಸರ್ಕಾರ ಕೈ ಬಿಡುವಂತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಬೇಕು. ಇದೇ ರೀತಿ ಸಹಕಾರಿ ಸಂಸ್ಥೆಗಳು, ಗ್ರಾಮೀಣ ಅಭಿವೃದ್ಧಿ, ಕೃಷಿ ಕಿಸಾನ್, ರೈತ, ವನವಾಸಿ ಸಂಘಟನೆಗಳು ಸರ್ಕಾರಕ್ಕೆ ಮನವಿ ನೀಡಬೇಕು. ಜತೆ, ತಮ್ಮ ವ್ಯಾಪ್ತಿಯಲ್ಲಿ ನದಿ ಜೋಡಣೆ ಯೋಜನೆ ದುಷ್ಪರಿಣಾಮಗಳ ಕುರಿತು ಜಾಗೃತಿ ಸಭೆ ನಡೆಸಬೇಕು.
* ಕಾಳಿ, ಬೇಡ್ತಿ, ಅಘನಾಶಿನಿ, ಶರಾವತಿ ನದಿಗಳು ಸೇರಿದಂತೆ ಪಶ್ಚಿಮಘಟ್ಟದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ನದಿ ತಿರುವು ಅಥವಾ ಜೋಡಣೆ ಯೋಜನೆ ಕೈಬಿಡಬೇಕು.
ಹೋರಾಟದಲ್ಲಿ ಜನ ಸಹಭಾಗಿತ್ವ ಅತ್ಯಗತ್ಯ. ಯಾವುದೇ ಯೋಜನೆಗಳಾದರೂ ಜನ ವಿರೋಧದ ನಡುವೆ ಆಗಲು ಸಾಧ್ಯವಿಲ್ಲ ಎಂದರು. ಪಶ್ಚಿಮಘಟ್ಟ, ಮಲೆನಾಡು ಜಿಲ್ಲೆಗಳಲ್ಲಿ ಪರಿಸರ ಸಂರಕ್ಷಣೆ, ಕಾರ್ಯಚಟುವಟಿಕೆ ಹೆಚ್ಚಿಸುವ ದೃಷ್ಟಿಯಿಂದ ಪಶ್ಚಿಮಘಟ್ಟ ಪರಿಸರ ಸಂಘ ಸಂಸ್ಥೆಗಳ ಒಕ್ಕೂಟ ರಚಿಸಲಾಗುವುದು.
ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದ ಪರಿಸರ ತಜ್ಞ ಬಿ.ಎಂ. ಕುಮಾರಸ್ವಾಮಿ, ಆದ್ಯತೆ ಮೇರೆಗೆ ದೇಶದ ವಿವಿಧ ಭಾಗದಲ್ಲಿ ತೆಗೆದುಕೊಂಡಿದ್ದ 35 ಯೋಜನೆಗಳಲ್ಲಿ 20 ವರ್ಷಗಳಲ್ಲಿ ಒಂದೇ ಒಂದು ನದಿ ಜೋಡಣೆ ಯೋಜನೆ ಕಾರ್ಯಗತ ಆಗಿಲ್ಲ. ಇಂಜಿನೀಯರ್ಗಳ ಅವೈಜ್ಞಾನಿಕ ಲೆಕ್ಕಾಚಾರದ ಯೋಜನೆ ಇವುಗಳಾಗಿವೆ. ನದಿ ನೀರನ್ನು ಯಾರ್ಯಾರು ಬಳಸುತ್ತಾರೋ ಅವರೆಲ್ಲರೂ ನದಿ ಜೋಡಣೆ ವಿಚಾರದಲ್ಲಿ ಅವರೆಲ್ಲರ ಸಹಭಾಗಿತ್ವಕ್ಕೆ ಅವಕಾಶವೇ ಇಲ್ಲ. ನದಿಯಲ್ಲಿ ನೀರೇ ಸಿಗದ ಸ್ಥಿತಿಯಲ್ಲಿರುವಾಗ ಯೋಜನೆ ಅನುಷ್ಠಾನದ ಆತುರವೇಕೆ? ಎಂದು ಪ್ರಶ್ನಿಸಿದರು.