ಬೆಂಗಳೂರು: ಇಲ್ಲಿನ ವಿಧಾನ ಸೌಧದಲ್ಲಿ ಬುಧವಾರ ಏರ್ಪಡಿಸಿದ್ದ ಖಾರ್ಲ್ಯಾಂಡ್ ನಿರ್ಮಾಣ ಅನುಷ್ಠಾನಗೊಳಿಸಲು ಮತ್ತು ಅದರ ರೂಪುರೇಷೆಗಳನ್ನು ಸಿದ್ದಪಡಿಸುವ ಸಲುವಾಗಿ ಪೂರ್ವಭಾವಿ ಸಭೆಯಲ್ಲಿ ಸ್ಪೀಕರ್ ಕಾಗೇರಿ ಉಪಸ್ಥಿತರಿದ್ದು, ಮಾಹಿತಿ ಪಡೆದುಕೊಂಡರು.
ಈ ಬಾರಿ ಬಜೆಟ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಿಗೆ ಖಾರ್ಲ್ಯಾಂಡ್ ನಿರ್ಮಾಣ ಹಾಗೂ ಪುನರುಜ್ಜಿವನಗೊಳಿಸುವ ಯೋಜನೆಗೆ 300 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ. ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಕಾಳಿ ಮತ್ತು ಗಂಗಾವಳಿ ನದಿಗಳು ಹರಿಯುವುದರಿಂದ ಖಾರ್ಲ್ಯಾಂಡ್ ಮತ್ತು ತಡೆಗೋಡೆ ನಿರ್ಮಾಣಕ್ಕೆ 100 ಕೋಟಿ ರೂ. ಅನುದಾನ ಸಾಕಾಗುವುದಿಲ್ಲ. ಅದಕ್ಕಾಗಿ 600 ಕೋಟಿಗೂ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ದಿ.ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಅನುದಾನ ನೀಡಿ ಖಾರ್ಲ್ಯಾಂಡ್ ನಿರ್ಮಾಣ ಮಾಡಿದ್ದರು. ಅದರ ನಂತರ ಮೊದಲ ಬಾರಿಗೆ ರಾಜ್ಯ ಸರ್ಕಾರವೂ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳ ಖಾರ್ಲ್ಯಾಂಡ್ ನಿರ್ಮಾಣ ಹಾಗೂ ಅವುಗಳ ಪುನರುಜ್ಜಿವನಕ್ಕೆ ವಿಶೇಷವಾಗಿ 300 ಕೋಟಿ ರೂಪಾಯಿ ಅನುದಾನ ನೀಡಿದೆ.
ಈ ಸಂದರ್ಭದಲ್ಲಿ ಸಚಿವರಾದ ಮಾಧುಸ್ವಾಮಿ, ಕಾರ್ಮಿಕ ಇಲಾಖೆ ಸಚಿವರಾದ ಶಿವರಾಮ ಹೆಬ್ಬಾರ್, ಆರ್.ವಿ ದೇಶಪಾಂಡೆ, ಶಾಸಕ ದಿನಕರ ಶೆಟ್ಟಿ, ಶಾಸಕಿ ರೂಪಾಲಿ ನಾಯ್ಕ, ಸುನೀಲ್ ನಾಯ್ಕ, ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.