ಶಿರಸಿ: ಮನಸ್ಸು ಸದಾ ಕುಣಿಯುತ್ತಿರುತ್ತದೆ. ಆದರೆ, ಶರೀರ ಕುಣಿತ ನೋಡಿ ಮನಸ್ಸು ನಿಲ್ಲಿಸಬೇಕು. ವಂದೇ ಪರಮಾನಂದಮ್ ನಮ್ಮ ಮನಸ್ಸಿಗೆ ಪರಮಾನಂದ ನೀಡುವ ಕಾರ್ಯ ಮಾಡುತ್ತದೆ ಎಂದು ಹಿರಿಯ ವಿದ್ವಾಂಸ, ಮಂಜುಗುಣಿ ದೇವಸ್ಥಾನದ ಪ್ರಧಾನ ಅರ್ಚಕ, ವೇ.ಮೂ.ಶ್ರೀನಿವಾಸ ಭಟ್ಟ ಹೇಳಿದರು.

ಅವರು ಮಂಜುಗುಣಿಯಲ್ಲಿ ವಿಶ್ವಶಾಂತಿ ಸರಣಿಯ ವಂದೇ ಪರಮಾನಂದಮ್ ನೃತ್ಯ ರೂಪಕದ ಮನೆ ಮನೆಗೂ ಮಾಧವ ನೃತ್ಯ ಪಯಣಕ್ಕೆ ಚಾಲನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ನೃತ್ಯ ಚಂಚಲತೆಗೆ ಉದಾಹರಣೆ. ಸದಾ ಒಂದಿಲ್ಲೊಂದು ಕುಣಿತ, ಅಭಿನಯಕ್ಕೆ ಸಜ್ಜಾಗಿರುತ್ತದೆ. ನಮ್ಮ ಮನಸ್ಸೂ ಹಾಗೇ. ಮನಸ್ಸಿನ ಚಂಚಲತೆ ನಿಲ್ಲಿಸುವ ತಾಕತ್ತು ನರ್ತನಕ್ಕಿದೆ. ಆನಂದದಿಂದ ಮನಸ್ಸು ನೆಮ್ಮದಿಯಾಗುತ್ತದೆ. ನಮಗಾಗಿ ಎಂಬುದಕ್ಕಿಂತ ನನಗಾಗಿ ಎಂದು ನೋಡಿದರೆ ಅದರ ಅನುಭವವೇ ಬೇರೆ. ಆಗ ಮನಸ್ಸಿಗೂ ಶಾಂತಿ ಲಭಿಸುತ್ತದೆ. ಬೇರೊಬ್ಬರ ಬಗ್ಗೆ ಮಾತನಾಡದೇ ನಮ್ಮದೇನು ಜವಬ್ದಾರಿ ಎಂದು ಎಲ್ಲರೂ ನೋಡಿದರೆ ನೆಮ್ಮದಿ ಸಿಗುತ್ತದೆ ಎಂದರು.
ನೃತ್ಯ ಪಯಣಕ್ಕೆ ಚಾಲನೆ ನೀಡಿದ ಜೀವ ಜಲ ಕಾರ್ಯಪಡೆ ಅಧ್ಯಕ್ಷ, ವಿಶ್ವದರ್ಶನದ ಉಪಾಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ನೆಲ ಜಲದ ಸಂರಕ್ಷಣೆಯ ಕಾರ್ಯದ ಜೊತೆಗೆ ಸಾಂಸ್ಕøತಿಕ ವಾತಾವರಣ ಕೂಡ ಪೋಷಿಸಬೇಕು. ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಹಿರಿಯ ವಿದ್ವಾಂಸ, ಮೇಲುಕೋಟೆ ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ವಿ.ಉಮಾಕಾಂತ ಭಟ್ಟ ಕೆರೇಕೈ, ನೃತ್ಯ ಮನಸ್ಸಿನ ಲಾಘವಕ್ಕೆ ಬೇಕು. ಮನೋ ಲಾಘವ ನರ್ತನದಿಂದ ಬರುತ್ತದೆ ಎಂದರು.

RELATED ARTICLES  ಜಿಲ್ಲೆಯಲ್ಲಿ ಇಂದು 51 ಮಂದಿಗೆ ಕೊರೋನಾ ಸೋಂಕು

ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ, ಸಾಂಸ್ಕೃತಿಕವಾಗಿ ಮಕ್ಕಳನ್ನು ಬೆಳೆಸುವ ಕಾರ್ಯ ನಡೆಯಬೇಕು. ಇಂಥ ಕಾರ್ಯಗಳು ನಾಡನ್ನು ಕಟ್ಟುವಲ್ಲಿ ಸಹಕಾರಿ ಆಗುತ್ತವೆ ಎಂದರು.
ವಿಶ್ವಶಾಂತಿ ಸೇವಾ ಟ್ರಸ್ಟನ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಸ್ವಾಗತಿಸಿದರು. ಉಪಾಧ್ಯಕ್ಷ ರಮೇಶ ಹಳೇಕಾನಗೋಡ ವಂದಿಸಿದರು. ಆರ್.ಎಸ್.ಹೆಗಡೆ ನಿರ್ವಹಿಸಿದರು.

RELATED ARTICLES  ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ಪಡೆದ ಶಾಸಕಿ ರೂಪಾಲಿ ನಾಯ್ಕ.

ಪರಮಾನಂದದೆಡೆ ಒಯ್ದ ರೂಪಕ: ಪ್ರೋ. ಎಂ.ಎ.ಹೆಗಡೆ ದಂಟ್ಕಲ್ ಅವರ ನಿರ್ದೇಶನದ ವಂದೇ ಪರಮಾನಂದಮ್ ಯಕ್ಷ ನೃತ್ಯ ರೂಪಕದ ಪ್ರದರ್ಶನ ಸಾರ್ವಜನಿಕರ, ಕಲಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು. ಕು. ತುಳಸಿ ಹೆಗಡೆ ಅವಳು ಒಂದುವರೆ ಗಂಟೆಗಳಲ್ಲಿ ಮಾಧವನ ಪರಮಾನಂದದ ಲೋಕ ಕಟ್ಟಿಕೊಟ್ಟಳು.
ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ್ ಯಲ್ಲಾಪುರ, ವಿಘ್ನೇಶ್ವರ ಗೌಡ ಹಿಮ್ಮೇಳದಲ್ಲಿ ಸಹಕಾರ ನೀಡಿದರೆ, ವೆಂಕಟೇಶ ಬೊಗ್ರಿಮಕ್ಕಿ ಪ್ರಸಾದನದಲ್ಲಿ ನೆರವಾದರು. ವಿಶ್ವಶಾಂತಿ ಸೇವಾ ಟ್ರಸ್ಟ ಕರ್ನಾಟಕವು ಮಂಜುಗುಣಿ ದೇವಸ್ಥಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಕಾರ್ಯಕ್ರಮ ಸಂಯೋಜಿಸಿತ್ತು.