ಕುಮಟಾ: ಅಳ್ವೆದಂಡೆಯ ಬಡ ಮೀನುಗಾರ ಕಾರ್ಮಿಕ ಗಜಾನನ ಮೇಸ್ತ ಕುಟುಂಬಕ್ಕೆ ರೋಟರಿ ವತಿಯಿಂದ 50 ಸಾವಿರ ರು. ಚೆಕ್ಕನ್ನು ರೋಟರಿ ಅಧ್ಯಕ್ಷ ಶಶಿಕಾಂತ ಕೋಳೇಕರ, ಕಲಭಾಗ ಗ್ರಾಮ ಪಂಚಾಯತ ಅಧ್ಯಕ್ಷೆ ಗೀತಾ ಕುಬಾಲರ ಸಮ್ಮುಖದಲ್ಲಿ ವಿತರಿಸಿದರು. ಕೆಲ ದಿನಗಳ ಹಿಂದಷ್ಟೇ ವಿದ್ಯುತ್ ಅವಘಡದಿಂದ ಪುಟ್ಟ ಮನೆ ಬೆಂಕಿಗಾಹುತಿಯಾಗಿದ್ದನ್ನು, ಸೂರಿಲ್ಲದೇ ಸದ್ಯಕ್ಕೆ ಬೇರೆಯವರ ಮನೆಯಲ್ಲಿದ್ದು ಮನೆಯನ್ನು ಮರುನಿರ್ಮಿಸಿಕೊಳ್ಳಲು ಹೆಣಗಾಡುತ್ತಿದ್ದ ಹೊತ್ತಿನಲ್ಲಿ ರೋಟರಿ ವತಿಯಿಂದ ಸಾಂತ್ವನ ನುಡಿದು ನೆರವನ್ನು ನೀಡುತ್ತಿರುವುದಾಗಿಯೂ, ಮುಂದಿನ ದಿನಗಳಲ್ಲಿ ಗೃಹೋಪಕರಣಗಳನ್ನು ಪೂರೈಸಲು ಪ್ರಯತ್ನಿಸುವುದಾಗಿಯೂ ರೋಟರಿ ಅಧ್ಯಕ್ಷರು ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯದರ್ಶಿ ಅತುಲ್ ಕಾಮತ ಅವರು, ಕುಮಟಾದ ವಿಷ್ಣು ಭಟ್ಟ, ಬೆಂಗಳೂರಿನ ಶ್ರೀವತ್ಸ ಹಾಗೂ ಕೈಗಾರಿಕೋದ್ಯಮಿ ಗಜಾನನ ಹರಿಕಾಂತ ತಮ್ಮೊಂದಿಗೆ ಕೈಜೋಡಿಸಿದ್ದಕ್ಕೆ ಅಭಿನಂದಿಸಿದರು. ಗ್ರಾ..ಪಂ. ಸದಸ್ಯರಾದ ಗೌರೀಶ ಕುಬಾಲ, ನಾಡದೋಣ ಸದಸ್ಯರಾದ ನಂದಾ ಜಾಧವ, ಅರುಣ ತದಡಿಕರ, ದೀಪಕ ಫಟ್ಕುರೆ, ರಾಘು ಲೋನೆ ಮೊದಲಾದವರು ಉಪಸ್ಥಿತರಿದ್ದು ರೋಟರಿ ಕ್ಲಬ್ಬಿನ ತತ್ಕಾಲ ಸೇವಾಕಾರ್ಯವನ್ನು ಶ್ಲಾಘಿಸಿದರು. ರೋಟರಿ ಸದಸ್ಯರಾದ ಜಯವಿಠ್ಠಲ ಕುಬಾಲ, ಮೌಸಿನ್ ಖಾಜಿ, ಎನ್.ಆರ್.ಗಜು ಮೊದಲಾದವರಿದ್ದರು.