ಶಿರಸಿ : ಉ.ಕ ಜಿಲ್ಲೆಯಲ್ಲಿ ನಿನ್ನೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ಹವಾಮಾನ ಇಲಾಖೆ ಮಳೆಯ ಮುನ್ಸೂಚನೆಯಂತೆ ಇಂದು ಸಂಜೆ ಭರ್ಜರಿ ಮಳೆಯಾಗಿದೆ. ಮುಂಡಗೋಡು ಸೇರಿದಂತೆ ಜಿಲ್ಲೆಯ ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಇನ್ನು ಅಕಾಲಿಕವಾಗಿ ಸಂಭವಿಸಿದ ಗುಡುಗು ಮಳೆಯಿಂದ ಜನಜೀವನದ ಮೇಲೆ ಸಹ ಪ್ರಭಾವ ಬೀರಿದೆ ಎನ್ನಲಾಗಿದೆ.
ಮುಂಡಗೋಡ ತಾಲೂಕಿನ ಶಿಂಗ್ನಳ್ಳಿ ಗ್ರಾಮದದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಸಿಡಿಲು ಬಡಿದು 17 ಮೇಕೆಗಳು ಸಾವನ್ನಪ್ಪಿವೆ. ಶಿರಸಿಯಲ್ಲಿ ಗುಡುಗು ಸಹಿತ ಭರ್ಜರಿ ಗಾಳಿ-ಮಳೆ
ಬಂಗಾಳಕೊಲ್ಲಿಯಲ್ಲಿ ಉಂಟಾದ ಮೇಲ್ಮೈ ಸುಳಿಗಾಳಿ ಪ್ರಭಾವದಿಂದಾಗಿ ಇನ್ನು ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮಾ.29 ರಂದು ನಗರದಲ್ಲಿ ಗುಡುಗು ಸಹಿತ ಗಾಳಿ-ಮಳೆಯಾಗಿದೆ.
ಬೆಳಿಗ್ಗೆಯಿಂದ ಸ್ವಲ್ಪ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ನಾಲ್ಕು ಗಂಟೆ ಹೊತ್ತಿಗೆ ಗುಡುಗು ಸಹಿತ ಭರ್ಜರಿ ಗಾಳಿ- ಮಳೆ ಸುರಿಯಲಾರಂಭಿಸಿದೆ. ಶಾಲೆಗೆ ತೆರಳಿದ್ದ ಮಕ್ಕಳು ಮನೆಗೆ ವಾಪಸ್ಸಾಗುವಾಗ ಛತ್ರಿ ಹಿಡಿದು ನಡೆದಾಡುವ ದೃಶ್ಯವಿತ್ತು. ಶಿರಸಿ ನಗರ ಭಾಗದಲ್ಲಿ ಅಲ್ಲದೇ ಗ್ರಾಮೀಣ ಭಾಗವಾದ ಬೆಂಗಳೆ-ಓಣಿಕೇರಿ, ಹೆಗಡೆಕಟ್ಟಾ ಇನ್ನಿತರೆ ಪ್ರದೇಶಗಳಲ್ಲಿ ಕೂಡಾ ಗುಡುಗು, ಗಾಳಿ ಸಹಿತ ಉತ್ತಮ ಮಳೆಯಾಗಿದೆ ಎಂದು ವರದಿಯಾಗಿದೆ.
ಏಕಾಏಕಿ ಸುರಿದ ಮಳೆಯಿಂದಾಗಿ ಕಳೆದ ನಾಲೈದು ದಿನದಿಂದ ಬಿಸಿಲಿನ ಝಳಕ್ಕೆ ಕಂಗೆಟ್ಟಿದ್ದ ಜನತೆ ಮಳೆ ನೋಡಿ ಖುಷಿ ಪಟ್ಟರು.