ಶಿರಸಿ: ತಾಲೂಕಿನ ಪ್ರಮುಖ ಹಾಲು ಸೊಸೈಟಿ ಎನಿಸಿಕೊಂಡಿರುವ ಹೆಗಡೆಕಟ್ಟಾ ಹಾಲು ಉತ್ಪಾದಕರ ಸಂಘ ಪ್ರಸಕ್ತ ವರ್ಷ ತನ್ನ ಸದಸ್ಯರಿಗೆ ಕೃಷಿ ಬಂಡಿಯನ್ನು ಉಡುಗೊರೆಯಾಗಿ ನೀಡಿದೆ. ರವಿವಾರ ಹೆಗಡೆಕಟ್ಟಾ ಗ್ರಾಮ ಪಂಚಾಯತ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕ ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅತಿಥಿಯಾಗಿ ಉಪಸ್ಥಿತರಿದ್ದು ಕೊಡುಗೆಯನ್ನು ವಿತರಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಹಾಲು ಉತ್ಪಾದಕರ ಕ್ಷೇತ್ರದಿಂದ ನಾನು ಪ್ರತಿನಿಧಿಸಿ ಕೊಳ್ಳುತ್ತಿರುವುದು ಖುಷಿ ತಂದಿದೆ. ಉತ್ತರ ಕನ್ನಡಕ್ಕೆ ಪ್ರತ್ಯೇಕವಾದ ಒಂದು ಹಾಲು ಒಕ್ಕೂಟದ ಅವಶ್ಯಕತೆ ಇದೆ ಎಂಬುದು ಮನಗಂಡಿದ್ದೇನೆ. ನಾವೆಲ್ಲ ಒಟ್ಟಾಗಿ ಸೇರಿ ಹೈನುಗಾರಿಕೆಯನ್ನು ಬೆಂಬಲಿಸಬೇಕು ಹಾಲು ಸಂಘಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹೆಗಡೆಕಟ್ಟಾ ಹಾಲು ಉತ್ಪಾದಕರ ಸಂಘದ ಕಾರ್ಯ ನಿರ್ವಹಣೆಯ ಬಗ್ಗೆ ಈ ಸಂದರ್ಭದಲ್ಲಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಡಿಸಿಸಿ ಬ್ಯಾಂಕ್ ವತಿಯಿಂದಲೂ ಹಾಲು ಉತ್ಪಾದಕರಿಗೆ ಸಹಾಯ-ಸಹಕಾರ ದೊರಕಿಸಿಕೊಡುವ ಭರವಸೆಯನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷೆ ವೀಣಾ ಭಟ್ಟ ಮಾತನಾಡಿ ಪಂಚಾಯತ ವತಿಯಿಂದ ಉತ್ಪಾದಕರಿಗೆ ದೊರಕಬಹುದಾದ ಸೌಲಭ್ಯ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು. ಹಾಲು ಸೊಸೈಟಿ ಉಪಾಧ್ಯಕ್ಷ ಟಿ ಆರ್ ಹೆಗಡೆ ಮಾತನಾಡಿ ಒಬ್ಬರು ಗಣ್ಯ ವ್ಯಕ್ತಿಯನ್ನು ಗುರುತಿಸಿ ಕಾರ್ಯಕ್ರಮ ನಡೆಸುತ್ತಿರುವುದು ನಮ್ಮ ಸಂಘದ ವತಿಯಿಂದ ಇದೇ ಮೊದಲು. ಸಂಘದ ಬೆಳವಣ ಗೆ ಹರ್ಷ ತಂದಿದೆ ಎಂದರು. ವೇದಿಕೆಯಲ್ಲಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಂ ಜಿ ಹೆಗಡೆ ಹೆಗಡೆಕಟ್ಟಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ತಾಲೂಕು ಪಂಚಾಯತ ಸದಸ್ಯ ವಿನಾಯಕ ಭಟ್ಟ ಹೆಗ್ಗಾರು, ಗ್ರಾಮ ಪಂಚಾಯತ ಸದಸ್ಯ ಮಂಜುನಾಥ ಹೆಗಡೆ ಮಕ್ಕಳತಾಯಿಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿನಾಯಕ ಹೆಗಡೆ ಕಾನಳ್ಳಿ ಸ್ವಾಗತಿಸಿ ವಂದಿಸಿದರು. ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅವರನ್ನು ಸನ್ಮಾನಿಸಲಾಯಿತು.