ಹೊನ್ನಾವರ : 2004 ರಲ್ಲಿ ಘಟಿಸಿದ್ದ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಸಂಖ್ಯೆ 262/2004 ಕಲಂ 279, 304(A) ಐಪಿಸಿ ಪ್ರಕರಣದಲ್ಲಿ ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಹೊನ್ನಾವರ ದಿಂದ ದಿನಾಂಕ 28-12-2005 ರಂದು 03 ತಿಂಗಳು ಜೈಲು ಶಿಕ್ಷೆ ಹಾಗೂ ರೂ.500 ದಂಡ ವಿಧಿಸಲ್ಪಟ್ಟರೂ ಸಹ ದಸ್ತಗಿರಿಗೆ ಸಿಗದೇ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಶಿಕ್ಷಿತ ಅಪರಾಧಿ ಶಿವಕುಮಾರ ತಂದೆ ಆದಿಮೂಲಂ, ಪ್ರಾಯ 52 ವರ್ಷ ಸಾ// ಶ್ರೀರಾಮಪುರ, ಬೆಂಗಳೂರು ಈತನನ್ನು ದಿನಾಂಕ 03-04-2021 ರಂದು ಬೆಂಗಳೂರಿನ ಬಾಗಲೂರು ದಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಕಾರವಾರ ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಲಾಗಿರುತ್ತದೆ.
ಶ್ರೀ ಶಿವಪ್ರಕಾಶ ದೇವರಾಜು ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಕಾರವಾರ, ಶ್ರೀ ಬದ್ರಿನಾಥ ಎಸ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉ.ಕ ಕಾರವಾರ, ಶ್ರೀ ಬೆಳ್ಳಿಯಪ್ಪ ಮಾನ್ಯ ಪೊಲೀಸ್ ಉಪಾಧೀಕ್ಷಕರು, ಭಟ್ಕಳ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀಧರ್ ಎಸ್.ಆರ್ ಸಿಪಿಐ ಹೊನ್ನಾವರ ರವರ ನೇತೃತ್ವದಲ್ಲಿ ಹೊನ್ನಾವರ ಠಾಣೆಯ ಶ್ರೀ ಶಶಿಕುಮಾರ ಪಿ.ಎಸ್.ಐ ಕಾ&ಸು, ಶ್ರೀಮತಿ ಸಾವಿತ್ರಿ ನಾಯಕ ಪಿ.ಎಸ್.ಐ ಅಪರಾಧ ವಿಭಾಗ , ವಿಶೇಷವಾಗಿ ಶ್ರೀ ನಾರಾಯಣ ಗೌಡ ಎ.ಎಸ್.ಐ ಹಾಗೂ ಸಿಬ್ಬಂದಿಯವರಾದ ಶ್ರೀ ಮಂಜುನಾಥ ಯಲ್ವಾಡಿಕಾವೂರ್ ಸಿಪಿಸಿ, ಶ್ರೀ ಕೃಷ್ಣಾ ಗೌಡ ಸಿ.ಎಚ್.ಸಿ ಇವರುಗಳ ತಂಡ 15 ವರ್ಷಗಳಿಂದ ಪತ್ತೆಯಾಗದೇ ತಲೆಮರೆಸಿಕೊಂಡಿದ್ದ ಶಿಕ್ಷಿತ ಅಪರಾಧಿಯನ್ನು ಪತ್ತೆ ಮಾಡಿ ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುತ್ತಾರೆ.
ಪತ್ತೆ ಕಾರ್ಯ ಕೈಗೊಂಡ ತಂಡದಲ್ಲಿದ್ದ ಪೊಲೀಸ್ ಅಧಿಕಾರಿ/ ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಕಾರವಾರ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.