ಸರಿವ ಕ್ಷಣಗಳನ್ನು ಬೊಗಸೆಯಲ್ಲಿ ಹಿಡಿದಿಡಲಿಕ್ಕಾಗುವುದಿಲ್ಲ…. ಆದರೆ ಸುಳಿವ ನೆನಪುಗಳನ್ನು ಬರೆದಿಡುವುದಕ್ಕಾಗುತ್ತದೆ ನನ್ನ ಬಳಿ. ಕರೆವ ಮನೆಗಳಿಗೆಲ್ಲಾ ಹೋಗಲಿಕ್ಕಾಗುವುದಿಲ್ಲ ಒಮ್ಮೊಮ್ಮೆ…ಆದರೆ ಹರಸುವ ಮನಸ್ಸುಗಳನ್ನು ಹೃದಯದಲ್ಲಿಟ್ಟು ಪೂಜಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲವೂ ನನ್ನ ಬಳಿಯೇ ಸಾಧಿಸಲಿಕ್ಕಾಗುವುದಿಲ್ಲ ಜೀವನದಲ್ಲಿ….ಆದರೆ ಸಾಧಕರನ್ನು ಕಂಡಾಗ ಸಂತೋಷಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲರಿಗೂ ಉಪಕರಿಸುವುದಕ್ಕಾಗುವುದಿಲ್ಲ ನನ್ನಲ್ಲಿ….ಆದರೆ ಯಾರೊಬ್ಬರು ಉಪಕರಿಸಿದರೂ ಸ್ಮರಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲರೂ ಬಯಸಿದಂತೆ ಬದುಕುವುದಕ್ಕೆ ಸಾಧ್ಯವಿಲ್ಲ…..ಆದರೆ ನಮ್ಮಷ್ಟಕ್ಕೆ ನಾವು ಬದುಕುವುದಕ್ಕೆ ಸಾಧ್ಯವಿದೆ ನಮ್ಮ ಬಳಿ. ಹಾರ ತುರಾಯಿ ಶಾಲು ಹೊದಿಸಿಯೇ ಸನ್ಮಾನ ಮಾಡಬೇಕೆಂದಿಲ್ಲ…ಆದರೆ ಪ್ರೀತಿಯಿಂದ ಅಭಿಮಾನದಿಂದ ನಾಲ್ಕು ಮಾತಾಡುವುದಕ್ಕೆ ಸಾಧ್ಯವಿದೆ ನಮ್ಮ ಬಳಿ. ನನ್ನ ಕಣ್ಣೆದುರಿಗೆ ಸಿಕ್ಕ ಪ್ರತಿಯೊಬ್ಬರ ಬದುಕಿಗೂ ಬಣ್ಣವಾಗುವುದಕ್ಕೆ ಸಾಧ್ಯವಿಲ್ಲ… ಆದರೆ ನನ್ನ ಬದುಕಿಗೆ ಬಣ್ಣವಾದವರನ್ನು ಮುಕ್ತ ಮನಸ್ಸಿನಿಂದ ಹೇಳಿಕೊಳ್ಳುವುದಕ್ಕೆ ಸಾಧ್ಯವಿದೆ ನನ್ನ ಬಳಿ.
*ಶ್ರೀ ಬಸವರಾಜ ಚಿತ್ರದುರ್ಗ*
ಕರ್ನಾಟಕ ರಾಜ್ಯವನ್ನು ನಕಾಶೆಯಲ್ಲಿ ಮಾತ್ರ ಪೂರ್ಣ ನೋಡಿದ್ದು ನಾನು. ಇನ್ನೂ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೇ ನನ್ನ ಬಳಿ ಭೇಟಿ ಕೊಡಲಾಗಲಿಲ್ಲ. ರಾಜ್ಯ ಏನು…?! ನಮ್ಮ ಜಿಲ್ಲೆಯ ಎಲ್ಲಾ ತಾಲೂಕುಗಳನ್ನೂ ನಾನು ಇನ್ನೂ ಪೂರ್ತಿ ನೋಡಿಲ್ಲ. ಅಷ್ಟಕ್ಕೂ ರಾಷ್ಟ್ರ, ಅಂತಾರಾಷ್ಟ್ರೀಯ ಮಾತುಗಳೆಲ್ಲ ದೂರವೇ ಬಿಡಿ. ಓಹೋ ಅದಕ್ಕೇ ಹೇಳಿದ್ದು…..ನಡೆದಷ್ಟೂ ದಾರಿಯಿದೆ. ತಿಳಿದಷ್ಟೂ ಜ್ಞಾನವಿದೆ… ಎಂದು. ಜಗತ್ತಿನ ಅತಿದೊಡ್ಡ ಶ್ರೀಮಂತನೂ ಭೂಮಿಯನ್ನು ಪೂರ್ಣ ನೋಡಿ ಬರುವುದಕ್ಕೆ ಸಾಧ್ಯವಾಗುವುದಿಲ್ಲ. ಎಷ್ಟು ಎತ್ತರದ ಶಿಖರದ ಮೇಲೆ ನಿಂತರೂ ನಾಳೆ ಕಾಣುವುದಿಲ್ಲ ನಮಗೆ. ಆದರೂ ನಾವೇನನ್ನೋ ಸಾಧಿಸಿದವರಂತೆ ನಾವೇನನ್ನೋ ಕಡೆದು ಕಟ್ಟೆ ಹಾಕಿದವರಂತೆ ಉಬ್ಬಿ ಕೊಬ್ಬಿ ಒಂದಿಷ್ಟು ವರ್ಷ ಈ ಭೂಮಿಯ ಮೇಲೆ ಬದುಕಿದ್ದು ಕೊನೆಗೊಂದಿನ ಭೂಮಿಯಿಂದ ಇಲ್ಲವಾಗಿಬಿಡುತ್ತೇವೆ. ಜೀವನದಲ್ಲಿ ನಮ್ಮ ಜೊತೆ ಜೊತೆಯಾಗುವ ಅನೇಕ ಸುಮನಸ್ಸುಗಳ ಆಪ್ತತೆಯನ್ನು ಬರೆಯುವುದಕ್ಕೆ ಮತ್ತೆ ಮನಸ್ಸಾಯಿತು ನನಗೆ. ಶ್ರೀಯುತ ಬಸವರಾಜ ಚಿತ್ರದುರ್ಗ ನನ್ನ ಇಂದಿನ ಅಕ್ಷರ ಅತಿಥಿ.
ಏಳೆಂಟು ವರ್ಷಗಳ ಹಿಂದೆ ಅವತ್ತೊಂದಿನ ನನಗೊಂದು ಫೋನ್ ಬಂತು. ನಾನು ಬಸವರಾಜ್ ಅಂತ ಚಿತ್ರದುರ್ಗದಿಂದ ಫೋನ್ ಮಾಡುತ್ತಿದ್ದೇನೆ… ಯಾರು ಸಂದೀಪ ಸರ್ ಅವರಾ ಮಾತನಾಡುತ್ತಿರುವುದು? ಎಂದರು. ಹೌದು ಸರ್..ಅಂದೆ. ಈ ಅಪರಿಚಿತ ವ್ಯಕ್ತಿಗಳು ತುಂಬಾ ದೂರದಿಂದ call ಮಾಡಿದಾಗ ಒಂದು ಕ್ಷಣ ಅವ್ಯಕ್ತ ಭಯ ಕಾಡುತ್ತದೆ ನನಗೆ. ಹಾಗೆ ನೋಡಿದರೆ ಗಂಡು ಮಕ್ಕಳಿಗೆ ಈ miss call ಹಾಗೂ message ಹಾವಳಿ ಕಡಿಮೆಯೇ. ಆದರೂ ಈಗೀಗ ಫೋನ್ ಮಾಡಿ ಗುರುತಿಸುವವರು ಹೆಚ್ಚಾದ ಮೇಲೆ ನನ್ನ ಬಗೆಗೇ ನನಗೆ ಒಂದು ಚಿಕ್ಕ ಪೊಗರು ಮೂಡಿದಂತಾಗಿ ಸ್ವರವನ್ನು ಸ್ವಲ್ಪ ಗಡುಸಾಗಿಸಿ ಹೌದು ಸರ್….ನಮಸ್ಕಾರ ಅಂದೆ. ಸಂದೀಪ ಸರ್ ನಿಮ್ಮ ಎರಡು ಪುಸ್ತಕಗಳನ್ನು ನಿನ್ನೆ ಓದಿದೆ. ನಮ್ಮ ಮಾವ ಶ್ರೀನಿವಾಸ್ ನನ್ನನ್ನು ಕರೆದು ಈ ಪುಸ್ತಕಗಳನ್ನು ಕೊಟ್ಟಿದ್ದರು. ನಾನು ಚಿತ್ರದುರ್ಗದ ಒಬ್ಬ ಸಾಮಾನ್ಯ ರೈತ. ಆದರೆ ಪುಸ್ತಕಗಳನ್ನು ಓದುವ ಹವ್ಯಾಸ ಮಾತ್ರ ಸದಾ ಇರುವ ನನಗೆ ನಿಜವಾಗಿಯೂ ನಿಮ್ಮ ಪುಸ್ತಕಗಳು ತುಂಬಾ ಹಿಡಿಸಿದವು. ಎಂದರು. ನಾನೆಷ್ಟೇ ಗಡುಸಾಗಿ ಮಾತನಾಡಿದರೂ ಅವರ ಧ್ವನಿ ಸ್ವಾಭಾವಿಕವಾಗಿಯೇ ಮತ್ತೂ ಗಡುಸಾಗಿತ್ತು. ನನಗಿಂತ ತುಂಬಾ ಹಿರಿಯರೆಂಬುದು ಅವರ ಧ್ವನಿಯಲ್ಲಿಯೇ ನನಗೆ ಪಕ್ಕಾ ಆಗುತ್ತಿತ್ತು. ಸರ್ ನಿಮ್ಮೆಲ್ಲಾ ಪುಸ್ತಕಗಳನ್ನು ನನಗೆ ಕಳುಹಿಸಿಕೊಡಿ ನಾನು ಓದಬೇಕಿದೆ ಎಂದರು. ಅದಾಗಲೇ ಹನ್ನೆರಡು ಪುಸ್ತಕಗಳನ್ನು ಬರೆದು ಸಾಹಿತಿ ಎಂದು ಕೆಲವರ ಬಳಿಯಾದರೂ ಕರೆಸಿಕೊಳ್ಳುತ್ತಿದ್ದ ನನಗೆ ಚಿತ್ರದುರ್ಗದಲ್ಲೂ ನನ್ನ network ಆರಂಭಗೊಳ್ಳುತ್ತಿರುವುದು ಬಲುವೇ ಸಂತಸ ತಂದಿತ್ತು. ನಮಸ್ಕಾರ ಸರ್ ನಿಮ್ಮಂಥ ಹಿರಿಯರ ಆಶೀರ್ವಾದ ನನ್ನ ಮೇಲೆ ಸದಾ ಇರಲಿ ಎಂದು ಹೇಳಿ ಫೋನ್ ಕಟ್ ಮಾಡಿದೆ.
ಆ ದಿನ ನಿದ್ರೆಯೇ ಬರಲಿಲ್ಲ ನನಗೆ. ನಮ್ಮ ಮನೆಯವರಿಗೆ ಹೇಳಿದೆ. ನೋಡೇ……ನಾನೇನೂ ಸಾಮಾನ್ಯ ಮನುಷ್ಯ ಅಂತ ತಿಳೀಬೇಡ. ನನ್ನ ಪುಸ್ತಕಗಳನ್ನು ಚಿತ್ರದುರ್ಗದ ಜನ ತರಿಸಿಕೊಂಡು ಓದುವಷ್ಟರ ಮಟ್ಟಿಗೆ ತಯಾರಾದೆ ಎಂದೆ. ? ನಮ್ಮನ್ನು ನಾವು ಹೊಗಳಿಕೊಳ್ಳುವುದರಲ್ಲಿ ಅದೇನೋ ಆತ್ಮತೃಪ್ತಿ ಇದ್ದೇ ಇರುತ್ತದೆ ಬಿಡಿ. ಅದು ಊಟವಾದ ಮೇಲೆ ತೇಗು ಬಂದಂತೆ. ? ಅಲ್ಲಿಂದ ಶುರುವಾದ ನಮ್ಮ ಬಸವರಾಜ್ ಸರ್ ಸ್ನೇಹ ಇವತ್ತಿನವರೆಗೂ ಹಾಗೆಯೇ ಇದೆ. 2013 ರಲ್ಲಿ ನಾನು ನನ್ನ 13 ನೇ ಪುಸ್ತಕದ ಬಿಡುಗಡೆ ಸಮಾರಂಭವನ್ನು ನಡೆಸಬೇಕಾದಾಗ ಬಸವರಾಜ್ ಸರ್ ಗೆ ಫೋನಾಯಿಸಿದೆ. ಬರಬೇಕೆಂದು ವಿನಂತಿಸಿದೆ. ಆದರೆ ಅವರು ಅಲ್ಲಿಂದ ಇಂಥದ್ದೊಂದು ಚಿಕ್ಕ ಸಮಾರಂಭಕ್ಕೆ ನನ್ನನ್ನು ಹುಡುಕಿಕೊಂಡು ಬರುತ್ತಾರೆಂಬ ಯಾವ ವಿಶ್ವಾಸವೂ ನನಗಿರಲಿಲ್ಲ. 300-400 ಮೈಲುಗಳ ದೂರದಿಂದ ಅವರು ನನ್ನನ್ನು ಹುಡುಕಿಕೊಂಡು ಬಂದೇ ಬಿಟ್ಟರು. ಬರುವಾಗ ಸ್ವಾಮಿ ಎಂಬ ಚಿತ್ರದುರ್ಗದ ಓರ್ವ ಹುಡುಗನನ್ನೂ ಕರೆದುಕೊಂಡು ಬಂದರು.
ಅವತ್ತು ನನ್ನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅತ್ಯಂತ ಸಂತೋಷ ಹಾಗೂ ಸಂಭ್ರಮದಿಂದ ಮಾತನಾಡಿದ ಬಸವರಾಜ್ ಸರ್ ಎಲ್ಲರ ಮೆಚ್ಚುಗೆಗೆ ಪಾತ್ರವಾದರು. ತಾನೊಬ್ಬ ಸಾಮಾನ್ಯ ರೈತ ಸಾಮಾನ್ಯ ರೈತ ಎಂದು ಪುನರುಚ್ಛರಿಸುತ್ತಲೇ ತಾನೊಬ್ಬ ಅಸಾಮಾನ್ಯ ಎನ್ನುವುದನ್ನು ಅವರು ನಿರೂಪಿಸಿದ್ದರು. ಅಲ್ಲಿಂದಾಚೆಗೂ ನಮ್ಮ ಅವರ ಸ್ನೇಹ ಸದಾ ಹಸಿರಾಗಿಯೇ ಇದ್ದದ್ದು. ಈ ಸಲ ಮತ್ತೆ ನಮ್ಮ ಮನೆಗೆ ಬರಬೇಕೆಂದು ಆಹ್ವಾನಿಸಿದಾಗ ನಮ್ಮ ಮನೆಗೆ ಮುಂಚಿತವಾಗಿ ಆಗಮಿಸಿ ನಮ್ಮ ಕುಟುಂಬದ ಒಬ್ಬ ಸದಸ್ಯರೇ ಎಂಬಂತೆ ನಮ್ಮೊಳಗೊಂದಾಗಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ನಮ್ಮ ಕಾರ್ಯಕ್ರಮದ ಮುಖ್ಯ ಅತಿಥಿಗಳೇ ಆಗಿ ಆಗಮಿಸಿದರೂ ನಮ್ಮ ಜೊತೆಗೆ ಬಲೂನು ಊದಿ ಸಂಭ್ರಮಿಸಿದರು. ಬಸವರಾಜ್ ಎಂಬ ಹೆಸರು ನಮ್ಮ ಜೊತೆ ಉಸಿರಾಗಿ ಬೆರೆತದ್ದು ಸುಳ್ಳಲ್ಲ.
ಸಂದೀಪ ಸರ್ ಹೆದರಬೇಡಿ ನಿಮ್ಮ ಜೊತೆ ನಾವಿದ್ದೇವೆ ಎನ್ನುವ ನೂರು ಜನ ನನಗೆ ಸಿಗುತ್ತಾರೆ. ಆದರೆ ನಿಮ್ಮ ಜೊತೆಗೆ ನಾವು ಇದ್ದೇವೆ ಎಂದು ಹೇಳದೆಯೂ ಇರುವ ಹತ್ತೇ ಹತ್ತು ಜನರಲ್ಲಿ ಅವರೊಬ್ಬರು. ಬಸವರಾಜ್ ಅವರು ಚಿತ್ರದುರ್ಗದ ಒಬ್ಬ ರೈತ ಮುಖಂಡರಾಗಿ, ಹಲವಾರು ಸಂಘ ಸಂಸ್ಥೆಗಳ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಾರೆ. ದೊಡ್ಡ ಕುಟುಂಬದ ಯಜಮಾನರಾಗಿ ಹಿರಿಕಿರಿಯರನ್ನು ಯೋಗ್ಯವಾಗಿ ನಡೆಸಿಕೊಳ್ಳುತ್ತಾರೆ. ಒಬ್ಬ ಸ್ನೇಹಿತನಾಗಿ, ಹಿರಿಯನಾಗಿ, ಮಾರ್ಗದರ್ಶಕರಾಗಿ ಅನೇಕರಿಗೆ ಚಿರ ಪರಿಚಿತ ಆಗಿರುವ ಬಸವರಾಜ್ ಅವರದ್ದು ಸ್ಪೂರ್ತಿದಾಯಕ ವ್ಯಕ್ತಿತ್ವ ಮತ್ತು ಬದುಕು.
ತಾನೊಬ್ಬನೇ ಬದುಕು ಕಟ್ಟಿಕೊಳ್ಳದೇ ತನ್ನವರಿಗೂ ಬದುಕು ಕಟ್ಟಿಕೊಳ್ಳಲು ಸಹಕರಿಸುವ ಬಸವರಾಜ್ ಸರ್ ಕರ್ನಾಟಕದ ಉದ್ದಗಲಕ್ಕೂ ಸಂಚರಿಸುವ ಸರ್ವಲೋಕ ಸಂಚಾರಿ. ಹತ್ತು ಕಿ.ಮೀ ಸಂಚರಿಸಿಯೇ ಸಾಕಾಯ್ತು ಎಂದು ಮಲಗುವ ನಮ್ಮಂಥ ಸೂಕ್ಷ್ಮಾಣು ಜೀವಿಗಳಿಗೆ ಬಸವರಾಜ್ ಸರ್ ಸ್ಫೂರ್ತಿ ಆಗುತ್ತಾರೆ. ಕಿರಿಯರಲ್ಲಿ ಕಿರಿಯರಾಗಿ ಹಿರಿಯರಲ್ಲಿ ಹಿರಿಯರಾಗಿ ಸದಾ ಸ್ಫೂರ್ತಿಯ ಚಿಲುಮೆಯಂತೆ ಓಡಾಡುವ ಬಸವರಾಜ್ ಸರ್ ಆತ್ಮೀಯತೆ, ಸರಳತೆ, ಸಜ್ಜನಿಕೆ ನಿಜಕ್ಕೂ ಮಾದರಿಯಾದದ್ದು.
ಮನುಷ್ಯ ಹಣದಿಂದಷ್ಟೇ ಶ್ರೀಮಂತನಾಗುವುದಿಲ್ಲ ಗುಣದಿಂದ ಶ್ರೀಮಂತನಾಗುತ್ತಾನೆ. ಬಸವರಾಜ್ ಸರ್ miles ದೂರದಲ್ಲಿದ್ದರೂ ಅವರ smile ನಮ್ಮ ಮನಸ್ಸಿಂದ ದೂರಾಗುವುದೇ ಇಲ್ಲ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಅವರಿಗೆ ದೀರ್ಘಾಯುಷ್ಯ ಆರೋಗ್ಯ ಕೊಟ್ಟು ಕಾಪಾಡಲೆಂಬುದೇ ನನ್ನ ನಿತ್ಯ ಪ್ರಾರ್ಥನೆ.