ಹೊನ್ನಾವರ : ಹಿಂದುಳಿದ ವರ್ಗದವರು, ಶೋಷಿತರು ಮತ್ತು ಸಮಾಜದ ಎಲ್ಲಾ ವರ್ಗದವರನ್ನು ಒಟ್ಟಾಗಿ ಕೊಂಡೊಯ್ಯುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಾಧ್ಯವಿದ್ದು, ಕಾಂಗ್ರೆಸ್ ಪಕ್ಷವನ್ನು ರಾಜ್ಯ ಮತ್ತು ರಾಷ್ಟ್ರದಲ್ಲಿ ನಾವೆಲ್ಲರೂ ಸೇರಿ ಸದೃಢಗೊಳಿಸಬೇಕಾಗಿದೆ ಎಂದು ಮಾಜಿ ವಾಯುವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ನೂತನ ಅಧ್ಯಕ್ಷ ನಾಗರಾಜ ನಾರ್ವೆಕರ್ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸೇರಿದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಹಲವಾರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದು, ಪ್ರತಿ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪರಿಚಯವಿರುವುದರಿಂದ ಮುಂದಿನ ದಿನದಲ್ಲಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗವನ್ನು ಅತ್ಯಂತ ಶಕ್ತಿ ಶಾಲಿಯಾಗಿ ಕಟ್ಟಲು ಹಗಲು ರಾತ್ರಿ ಪರಿಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಮಾತನಾಡಿ ಸದ್ಯದಲ್ಲೇ ತಾಲೂಕು ಮತ್ತು ಜಿಲ್ಲಾ ಪಂಚಾಯತ ಚುನಾವಣೆ ಬರುತ್ತಿದ್ದು, ಕಾರ್ಯಕರ್ತರು ಒಮ್ಮನಸ್ಸಿನಿಂದ ಪಕ್ಷದ ಸಂಘಟನೆಯಲ್ಲಿ ಸ್ವಯಂ ಪ್ರೇರಿತರಾಗಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು. ದೇಶ ಮತ್ತು ರಾಜ್ಯವನ್ನಾಳುತ್ತಿರುವ ಇಂದಿನ ಬಿ.ಜೆ.ಪಿ. ಸರಕಾರ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ತೊಡಗಿಸಿಕೊಳ್ಳದೇ, ಬರೇ ಜಾತಿ, ಧರ್ಮದ ಬಾವನೆಗಳನ್ನು ಕೆರಳಿಸುವುದರಲ್ಲಿಯೇ ಸಮಯ ದುಡುತ್ತಿದೆ ಎಂದು ಆಪಾದಿಸಿದರು.
ಈ ಸಂದರ್ಭದಲ್ಲಿ ಹೊನ್ನಾವರ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಸಂತೋಷ ಮೇಸ್ತ, ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ಪಕ್ಷದ ಮುಖಂಡರಾದ ಮೋಹನ ಮೇಸ್ತ, ಕೃಷ್ಣ ಹರಿಜನ, ಹನೀಫ್ ಶೇಖ್, ನೆಲ್ಸನ್ ರೊಡ್ರಗಿಸ್, ಗಜಾನನ ನಾಯ್ಕ, ಚಂದ್ರಶೇಖರ ಚಾರೋಡಿ, ಬ್ರೇಜಿಲ್ ಪಿಂಟೋ ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು. ಹೊನ್ನಾವರ ಬ್ಲಾಕ್ ಕಾಂಗ್ರೆಸ್ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕೆ.ಎಚ್. ಗೌಡ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.