ಕಾರವಾರ : ಸಾರಿಗೆ ಇಲಾಖೆ ನೌಕರರ ಮುಷ್ಕರದಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಚಾರ ಮಾಡುತಿದ್ದ ಬಸ್‌ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿದೆ.
ಉತ್ತರಕನ್ನಡದ ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದಲ್ಲಿಯೂ ಬಸ್ ಸಂಚಾರ ಕಂಡುಬಂದಿಲ್ಲ.
ಸರಕಾರಿ ಬಸ್ ಆಧಿಸಿ ನಿತ್ಯದ ಕಾಯಕದಲ್ಲಿ ತೊಡಗಿಕೊಂಡಿದ್ದ ಜನರು ಇಂದು ಹೈರಾಣಾದರು. ಗ್ರಾಮೀಣ ಭಾಗಗಳಿಗೆ ಎಂದಿನಂತೆ ಟೆಂಪೊ ಸಂಚಾರ ನಡೆಯಿತು.
ಮುಷ್ಕರವು ಅಧಿಕೃತವಾಗಿ ಬುಧವಾರ ಆರಂಭವಾದರೂ ವಿವಿಧೆಡೆ ಮಂಗಳವಾರ ಮಧ್ಯಾಹ್ನದ ನಂತರದಿಂದಲೇ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಗೈರಾಗಿದ್ದರು. ಹಾಗಾಗಿ ಬೆಂಗಳೂರಿನಿಂದ ರಾತ್ರಿ ಹೊರಟು ಕಾರವಾರಕ್ಕೆ ಬೆಳಿಗ್ಗೆ ತಲುಪುವ ಕೆಲವು ಬಸ್‌ಗಳು ಬರಲಿಲ್ಲ.
ಕಾರವಾರ ನಗರಕ್ಕೆ ಗೋವಾ ಸಾರಿಗೆ ಸಂಸ್ಥೆಯ ಬಸ್‌ಗಳೂ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತವೆ. ಆದರೆ, ಇಂದು ಅವು ಸಹ ಬರಲಿಲ್ಲ.
ಪ್ರಯಾಣಿಕರಿಗೆ ತೊಂದರೆಯಾಗದಂತೆ ಸುಮಾರು 140 ಬಸ್‌ಗಳ ವ್ಯವಸ್ಥೆ ಮಾಡಿದ್ದಾಗಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಗಳಯ ತಿಳಿಸಿದ್ದಾರೆ. ಆದರೆ, ನಗರದ ಬಸ್ ನಿಲ್ದಾಣದಲ್ಲಿ ಒಂದೂ ಬಸ್ ಇಲ್ಲದೇ ಬಿಕೊ ಎನ್ನುತ್ತಿತ್ತು.