ಸರಿವ ಕ್ಷಣಗಳನ್ನು ಬೊಗಸೆಯಲ್ಲಿ ಹಿಡಿದಿಡಲಿಕ್ಕಾಗುವುದಿಲ್ಲ…. ಆದರೆ ಸುಳಿವ ನೆನಪುಗಳನ್ನು ಬರೆದಿಡುವುದಕ್ಕಾಗುತ್ತದೆ ನನ್ನ ಬಳಿ. ಕರೆವ ಮನೆಗಳಿಗೆಲ್ಲಾ ಹೋಗಲಿಕ್ಕಾಗುವುದಿಲ್ಲ ಒಮ್ಮೊಮ್ಮೆ…ಆದರೆ ಹರಸುವ ಮನಸ್ಸುಗಳನ್ನು ಹೃದಯದಲ್ಲಿಟ್ಟು ಪೂಜಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲವೂ ನನ್ನ ಬಳಿಯೇ ಸಾಧಿಸಲಿಕ್ಕಾಗುವುದಿಲ್ಲ ಜೀವನದಲ್ಲಿ….ಆದರೆ ಸಾಧಕರನ್ನು ಕಂಡಾಗ ಸಂತೋಷಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲರಿಗೂ ಉಪಕರಿಸುವುದಕ್ಕಾಗುವುದಿಲ್ಲ ನನ್ನಲ್ಲಿ….ಆದರೆ ಯಾರೊಬ್ಬರು ಉಪಕರಿಸಿದರೂ ಸ್ಮರಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲರೂ ಬಯಸಿದಂತೆ ಬದುಕುವುದಕ್ಕೆ ಸಾಧ್ಯವಿಲ್ಲ…..ಆದರೆ ನಮ್ಮಷ್ಟಕ್ಕೆ ನಾವು ಬದುಕುವುದಕ್ಕೆ ಸಾಧ್ಯವಿದೆ ನಮ್ಮ ಬಳಿ. ಹಾರ ತುರಾಯಿ ಶಾಲು ಹೊದಿಸಿಯೇ ಸನ್ಮಾನ ಮಾಡಬೇಕೆಂದಿಲ್ಲ…ಆದರೆ ಪ್ರೀತಿಯಿಂದ ಅಭಿಮಾನದಿಂದ ನಾಲ್ಕು ಮಾತಾಡುವುದಕ್ಕೆ ಸಾಧ್ಯವಿದೆ ನಮ್ಮ ಬಳಿ. ನನ್ನ ಕಣ್ಣೆದುರಿಗೆ ಸಿಕ್ಕ ಪ್ರತಿಯೊಬ್ಬರ ಬದುಕಿಗೂ ಬಣ್ಣವಾಗುವುದಕ್ಕೆ ಸಾಧ್ಯವಿಲ್ಲ… ಆದರೆ ನನ್ನ ಬದುಕಿಗೆ ಬಣ್ಣವಾದವರನ್ನು ಮುಕ್ತ ಮನಸ್ಸಿನಿಂದ ಹೇಳಿಕೊಳ್ಳುವುದಕ್ಕೆ ಸಾಧ್ಯವಿದೆ ನನ್ನ ಬಳಿ.
*ಶ್ರೀ ಎಸ್ ಎಂ ಭಟ್ಟ ತಲಗೆರೆ*
ಅಯ್ಯೋ….ನಾನು ಹೇಳಿಕೊಳ್ಳುವಂತಹ ಶ್ರೀಮಂತನಲ್ಲ. ನನಗೆ ಅಂತಹ ಪ್ರತಿಭೆಯೂ ಇಲ್ಲ. ನನ್ನ ತಾಪತ್ರಯಗಳೋ ಮುಗಿಯುವುದೇ ಅಲ್ಲ. ಒಂದುವೇಳೆ ನಾನು ಶ್ರೀಮಂತನಾಗಿದ್ದರೆ ಕೈಯೆತ್ತಿ ಕೊಡುತ್ತಿದ್ದೆ. ಸಹಕಾರ ನೀಡುವ ಜಾಗದಲ್ಲಿ ಇದ್ದರೆ ಒಂದು ಪೈಸಾ ಅಪೇಕ್ಷಿಸದೇ ಉಪಕರಿಸುತ್ತಿದ್ದೆ. ಒಂದು ವೇಳೆ ನನಗೆ ಅಧಿಕಾರವಿದ್ದರೆ ಎಲ್ಲರಿಗೂ ನೆರವಾಗುತ್ತಿದ್ದೆ. ಹೀಗೆ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುತ್ತಾ ಜೀವನ ನಡೆಸುವ ಅದೆಷ್ಟು ಜನವಿಲ್ಲ. ಇರುವ ಅವಕಾಶದ ಕುರಿತಾಗಿ ಸ್ವಲ್ಪವೂ ಕೃತಜ್ಞತಾ ಭಾವ ಇಲ್ಲದೇ ಇರದುದರ ಬಗೆಗೇ ಚಿಂತಿಸುವ ಕೊರಗುವ ಜನರಿಗೆ ದೇವನಾದರೂ ಏನು ನೀಡಿಯಾನು?! ಅವನಿಗೆ ಗೊತ್ತು. ಇವನು ಇದ್ದಾಗಲೇ ನೀಡದವನು. ಮತ್ತೆ ಎಷ್ಟು ಕೊಟ್ಟರೂ ಅವನು ಕೊರತೆಗಳ ಪಟ್ಟಿಯನ್ನೇ ಇಡುತ್ತಾನೆ ವಿನಹ ಇನ್ನೊಬ್ಬರಿಗೆ ಉಪಕರಿಸುವ ಗುಣ ಜನ್ಮದಲ್ಲಿ ಇವನಿಗೆ ಬರಲಾರದು ಎಂಬುದು. ಅದಿಲ್ಲ, ಇದಿಲ್ಲ, ಇವನು ನನಗಾವುದಿಲ್ಲ, ಅವನ ಮಾತು ನನಗೆ ಸೇರುವುದಿಲ್ಲ, ಅಲ್ಲಿಗೆ ನಾನು ಹೋಗುವುದಿಲ್ಲ, ಹೀಗೆ ಇಲ್ಲಗಳ ಪಟ್ಟಿ ಮಾಡುತ್ತಲೇ ಇಲ್ಲವಾಗುವ ದಿನ ಹತ್ತಿರ ಬಂದು ಬಿಡುತ್ತದೆ. ನಾನಿದ್ದೇನೆ ಎಂಬುದನ್ನು ತಮ್ಮ ಕಾರ್ಯಗಳಿಂದಲೇ ಸಾಧಿಸಿ ತೋರಿಸುವ ಶ್ರೀ ಎಸ್ ಎಂ ಭಟ್ಟ ತಲಗೆರೆ ಇಂದಿನ ನನ್ನ ಅಕ್ಷರ ಅತಿಥಿ.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ತಲಗೆರೆಯವರಾದ ಎಸ್.ಎಂ ಭಟ್ಟರು ವೃತ್ತಿಯಿಂದ ಶಿಕ್ಷಕರು. ಪ್ರಸ್ತುತ ಖರ್ವಾ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಚುರುಕಿನ ಸ್ವಭಾವದ ಸರಳ ಸಜ್ಜನ. ತಮ್ಮ ವೃತ್ತಿ ಜೀವನದ ಬಹುತೇಕ ಭಾಗವನ್ನು ಸಂಪನ್ಮೂಲ ವ್ಯಕ್ತಿಯಾಗಿಯೇ ಕಾರ್ಯನಿರ್ವಹಿಸಿದ ಎಸ್.ಎಂ ಭಟ್ಟರು ಕ್ರಿಯಾಶೀಲ ಪ್ರತಿಭಾನ್ವಿತ ಶಿಕ್ಷಕರು. ಅವರಿಗೆ ಹಳೆಯ ಕಾಗದಪತ್ರಗಳೂ ಗೊತ್ತು. ಹೊಸ ತಂತ್ರಜ್ಞಾನವೂ ಗೊತ್ತು. ಗೌರವ ಕೊಟ್ಟೂ ಗೊತ್ತು. ತೆಗೆದುಕೊಂಡೂ ಗೊತ್ತು. ಹೊನ್ನಾವರ ತಾಲೂಕಿನ ಗುರುತಿಸಬಹುದಾದ ಶಿಕ್ಷಕರಲ್ಲಿ ಎಸ್ ಎಂ ಭಟ್ಟ ಸರ್ ಕೂಡ ಒಬ್ಬರು. ಎಲ್ಲರೊಳಗೊಂದಾಗಿ ಹಿಡಿದ ಕೆಲಸವನ್ನು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಸಮಯಕ್ಕೆ ಸರಿಯಾಗಿ ಮುಗಿಸುವುದರಿಂದಲೇ ಅವರು ಇಲಾಖೆಯ ಅಧಿಕಾರಿಗಳಿಗೂ ಅಚ್ಚುಮೆಚ್ಚಿನ ವ್ಯಕ್ತಿಗಳು.
ಸಂಬಂಧದಲ್ಲಿಯೂ ಹತ್ತಿರದವರಾಗಿ ವ್ಯಕ್ತಿತ್ವ ಹಾಗೂ ಸ್ನೇಹದಿಂದ ಮತ್ತೂ ಹತ್ತಿರದವರಾದ ಎಸ್. ಎಂ ಭಟ್ಟರನ್ನು ನಾನು ಅತ್ಯಂತ ಗೌರವಾದರಗಳಿಂದ ಕಾಣುತ್ತೇನೆ. ನಾನು ಶಿಕ್ಷಕನಾಗಿ ವರ್ಗಾವಣೆಗೊಂಡು ಬಂದ ಕಾಲಕ್ಕೆ ನನ್ನನ್ನು ಆತ್ಮೀಯವಾಗಿ ಕಂಡು ನಾಲ್ಕಾರು ಜನರಿಗೆ ಪರಿಚಯಿಸುತ್ತಾ ನನ್ನನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಅವರನ್ನು ನಾನೆಂದೂ ಮರೆಯುವಂತಿಲ್ಲ. ಅದರಲ್ಲೂ ನನ್ನ ಸಾಹಿತ್ಯಕ ಬದುಕಿನಲ್ಲಿ ಅವರ ಪಾತ್ರ ಬಹು ದೊಡ್ಡದು.
2011 ರಲ್ಲಿ ನಾನು ನನ್ನ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಗೊಳಿಸಲು ಮುಂದಾದಾಗ ಎಸ್ ಎಂ ಭಟ್ಟ ಸರ್ ತಮ್ಮೆಲ್ಲಾ ಪರಿಚಯದ ಜನಕ್ಕೆ ಸಂದೀಪ ಬಹಳ ಪ್ರತಿಭಾವಂತನೆಂಬುದನ್ನೂ ಅವನ ಪುಸ್ತಕಗಳನ್ನು ಕೊಂಡು ಓದಲೇ ಬೇಕೆಂದು ಖಡಾಖಂಡಿತವಾಗಿ ಹೇಳುತ್ತಿದ್ದರು. ಮೊದಲಾಗಿ ಒಬ್ಬ ಲೇಖಕ ಜನರ ಹತ್ತಿರ ಹೋಗುವುದಕ್ಕೆ ಹೀಗಲ್ಲದೇ ಸಾಧ್ಯವಿಲ್ಲ. ಬರೀ ಪುಸ್ತಕಗಳನ್ನು ಬರೆದು ನಮ್ಮ ಮನೆಯ ಕಪಾಟಿನಲ್ಲಿಯೇ ಅದು ಕೊಳೆಯುತ್ತಿದ್ದರೆ ಏನು ಪ್ರಯೋಜನ ಹೇಳಿ?! ಅವರ ಪರಿಚಯದ ವಲಯದವರು ಮೊದಲು ನನ್ನ ಪುಸ್ತಕಗಳನ್ನು ಓದಿ ನಂತರ ತಮ್ಮ ಸ್ನೇಹಿತ ವಲಯಕ್ಕೆ ಅದನ್ನು ಹೇಳುತ್ತಿದ್ದರು. ಹೀಗಾಗಿ ನನ್ನ ಓದುಗರ ಒಂದು ವಲಯವೇ ಸೃಷ್ಟಿಯಾದಂತಾಗಿ ನನಗೆ ಬರೆದಾಗೆಲ್ಲಾ ಅಪಾರ ಅಭಿಮಾನ ಪ್ರೀತಿ ಸಿಗುವುದಕ್ಕೆ ಮೂಲ ಎಸ್.ಎಂ ಭಟ್ಟರ ಪರಿಶ್ರಮವೂ ಕಾರಣವಿದೆ. ನಾನು ಮುಜುಗರದಿಂದ ಅವರ ಬಳಿ ಸಹಾಯ ಯಾಚಿಸದಿರುವಾಗಲೂ ಅವರೇ ಖುದ್ದು ನನ್ನ ಬಳಿ ಮಾತನಾಡಿ ನಿಮಗೆ ಪ್ರೋತ್ಸಾಹಿಸದೇ ಇನ್ಯಾರಿಗೆ ಪ್ರೋತ್ಸಾಹಿಸಲಿ ನೀವು ಮತ್ತಷ್ಟು ಬೆಳೆಯಬೇಕು ಎಂದು ನನ್ನ ಕಣ್ಣುಗಳಿಗೆ ಕನಸು ತುಂಬುತ್ತಿದ್ದರು. ಬರೀ ಹೇಳುವುದಲ್ಲ. ಮಾಡಿ ತೋರಿಸಬಲ್ಲ ಛಲವಾದಿ ಅವರು.
ಎಸ್ ಎಂ ಭಟ್ಟರು ಅತ್ಯಂತ ಚಾಣಾಕ್ಷ ನಡೆಯ ನಿಗರ್ವಿ. ಒಬ್ಬರಿಗಿಂತ ಒಬ್ಬರು ಪ್ರತಿಭಾನ್ವಿತರಾದ ಮಕ್ಕಳು ಅವರಿಗೆ. ಮಡದಿ ಮಂಗಲಾ ಶಿಕ್ಷಕಿಯೂ ಹೌದು. ಮನೆ ನಡೆಸಿಕೊಂಡು ಹೋಗುವ ತುಂಬು ಗೃಹಿಣಿಯೂ ಹೌದು. ಕೃಷಿಯೂ ಅವರಿಗೆ ಅಷ್ಟೇ ಪ್ರೀತಿ. ಒಂದು ಕ್ಷಣ ಖಾಲಿ ಕುಳಿತುಕೊಳ್ಳದ ಅವರು ಇಲಾಖೆಯ ಯಾವುದೇ ವಿಷಯದಲ್ಲೂ ಮಾರ್ಗದರ್ಶನ ಮಾಡುವುದರ ಜೊತೆಗೆ ಶಿಕ್ಷಕ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಅಪಾರ ಸ್ನೇಹಿತ ಬಳಗ, ಬಂಧು ಬಾಂಧವರನ್ನು ಹೊಂದಿದ ಅವರದ್ದು ಸಾಧನೆಯ ಬದುಕು.
ಜೀವನದ ಎಲ್ಲಾ ಪಾತ್ರಗಳಿಗೂ ಯಶಸ್ವಿಯಾಗಿ ಜೀವ ತುಂಬುವ ನಾಯಕ ಅವರು. ಧೈರ್ಯವೇ ಅವರ ಮೂಲಮಂತ್ರ. ತಮ್ಮ ಕೆಲಸವನ್ನು ಹೇಗಾದರೂ ಮಾಡಿ ಮುಗಿಸಿ ಜೈ ಎನ್ನುವವರಲ್ಲ ಅವರು. ಹೇಗಾಗಬೇಕೋ ಹಾಗೆಯೇ ಆಗಬೇಕೆಂಬ ಹಟ ಅವರದ್ದು. ನನ್ನ ಯಾವುದೇ ಕಾರ್ಯಕ್ರಮಗಳಿಗೂ ತಪ್ಪದೇ ಹಾಜರಾಗಿ ಸಂದೀಪ್ ಸರ್ ನನ್ನಿಂದ ಏನಾಗಬೇಕೆಂದು ಕೇಳುತ್ತಾರೆ. ನಾನು ಅವರಿಗಿಂತ ಎಷ್ಟೋ ಕಿರಿಯವನಾದರೂ, ಸಂಬಂಧಿಯಾದರೂ ಇಂದಿನವರೆಗೂ ಅವರು ಒಮ್ಮೆಯೂ ಏಕವಚನದಲ್ಲಿ ಸಂಬೋಧಿಸಿದ್ದಿಲ್ಲ. ಎಷ್ಟೇ ಅವಸರದಲ್ಲಿರಲಿ ನಾನು ಕಂಡಾಕ್ಷಣ ನಾನೇ ಅವರನ್ನು ಮಾತನಾಡಿಸಲಿ ಎಂದು ಕಾದದ್ದಿಲ್ಲ. ತಕ್ಷಣ ಕಂಡು ವಿಚಾರಿಸಿಯೇ ಹೋಗುತ್ತಾರೆ. ಒಮ್ಮೊಮ್ಮೆ ಅತ್ಯಂತ ಸಂದಿಗ್ಧ ಹಾಗೂ ಸಂಕಟ ಪರಿಸ್ಥಿತಿ ಎದುರಾಗುವುದಾದರೆ ಮುನ್ಸೂಚನೆ ನೀಡುತ್ತಾರೆ ಮತ್ತು ಮಾರ್ಗದರ್ಶಿಸುತ್ತಾರೆ.
ಒಬ್ಬ ವ್ಯಕ್ತಿ ಒಬ್ಬನಿಗಿಷ್ಟವಾದ ಮಾತ್ರಕ್ಕೆ ಎಲ್ಲರಿಗೂ ಆಗಿಯೇ ಬಿಡುತ್ತಾನೆಂದಲ್ಲ. ಕಾರಣವೇ ಇಲ್ಲದೇ ವಿರೋಧಿಸುವ ಜನ ಪ್ರಪಂಚದಲ್ಲಿ ಸಾಕಷ್ಟು ಸಿಗುತ್ತಾರೆ. ಒಬ್ಬ ವ್ಯಕ್ತಿಗೆ ನಮ್ಮ ರೂಪವೇ ಇಷ್ಟವಾಗದಿರಬಹುದು. ಮಾತು ಇಷ್ಟವಾಗದಿರಬಹುದು. ಅವರಿಗೆ ಕೊಡುವ ಗೌರವ ಸಾಲದಿರಬಹುದು. ನಮ್ಮ ನಡೆ ಖುಷಿ ಕೊಡದಿರಬಹುದು. ನಮ್ಮ ಪ್ರತಿಭೆ ಕಣ್ಣು ಕುಕ್ಕಬಹುದು. ಅವರ ಸಂಸ್ಕಾರವೇ ಅಂಥದ್ದಿರಬಹುದು. ಆನುವಂಶಿಕವಾಗಿ ಅವರಿಗೆ ಮಾನಸಿಕ ತೊಂದರೆ ಇರಬಹುದು. ಅಮಸಾಣಿ (ಸೊಕ್ಕಿನ ) ಬುದ್ಧಿಯವರೂ ಆಗಿರಬಹುದು. ಹೀಗಾಗಿ ನಮ್ಮ ದಾರಿ ನಮಗೆ. ಇನ್ನೊಬ್ಬನ ದಾರಿ ಇನ್ನೊಬ್ಬನಿಗೆ. ಜಗವನ್ನು ಮೆಚ್ಚಿಸುವುದಕ್ಕೆ ಜಗದೀಶ್ವರನಿಗೇ ಆಗಲಿಲ್ಲವಂತೆ. ಹೀಗಾಗಿ ಇನ್ನೊಬ್ಬನಿಗಾಗಿ ನಾವು ನಮ್ಮ ಸರಿಯಾದ ವ್ಯಕ್ತಿತ್ವನ್ನೂ ತಿದ್ದಿ ಹಾಳುಮಾಡಿಕೊಳ್ಳಬಾರದು.
ಮೊನ್ನೆ ಮೊನ್ನೆ ನನ್ನ 22-23 ನೇ ಕೃತಿ ಬಿಡುಗಡೆ ಆದ ಸಂದರ್ಭಕ್ಕೂ ನಮ್ಮ ಮನೆಗೆ ಬಂದು ಕಾರ್ಯಕ್ರಮ ಚಂದಗಾಣಿಸಿಕೊಟ್ಟು ಮಾರನೇಯ ದಿನವೇ ನನಗೊಂದಿಷ್ಟು ಪುಸ್ತಕ ಕಳುಹಿಸಿಕೊಡಿ ನಾನು ನನ್ನ ಸ್ನೇಹಿತ ಬಳಗಕ್ಕೆ ಹಂಚಿಕೊಳ್ಳುವೆ ಎಂದರು. ಒಬ್ಬ ವ್ಯಕ್ತಿ ಬರೀ ನಾನಿದ್ದೇನೆ ನಿನ್ನ ಜೊತೆ ಎಂದು ಹೇಳುವುದಲ್ಲ. ಸಮಯ ಬಂದಾಗ ಇದ್ದು ತೋರಿಸುವುದಕ್ಕೆ ಎಸ್ ಎಂ ಭಟ್ಟ ಸರ್ ಪಕ್ಕಾ ಉದಾಹರಣೆ.
ಬೇಕು. ನಮಗಿಂಥ ಮಾರ್ಗದರ್ಶಕರು ಬೇಕು. ನಮಗಿಂಥ ಸ್ನೇಹಿತರು ಬೇಕು. ನಮ್ಮ ನಡೆಯ ತಪ್ಪುಗಳನ್ನೂ ಆತ್ಮೀಯವಾಗಿ ಎತ್ತಿ ತೋರಿಸುವವರು ಬೇಕು. ನಮ್ಮ ಬಗೆಗೆ ಇತರರು ವೃಥಾ ಮತ್ಸರ ಪಡುವಾಗ ಧೈರ್ಯದಿಂದ ಅವರ ಇದಿರಿನಲ್ಲೇ ಉತ್ತರಿಸುವವರು ಬೇಕು. ನಮ್ಮ ಆಗುಹೋಗುಗಳಲ್ಲಿ ಒಂದಾಗುವ ಮನಸ್ಸು ಇದ್ದವರು ಬೇಕು. ಕೊನೆಗೊಂದಿನ ಕಣ್ಣೀರು ಸುರಿಸುವುದಕ್ಕಾದರೂ ಜನರಿರಬೇಕು.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಅವರಿಗೆ ದೀರ್ಘಾಯುಷ್ಯ ಆರೋಗ್ಯ ಕೊಟ್ಟು ಕಾಪಾಡಲೆಂಬುದೇ ನನ್ನ ನಿತ್ಯ ಪ್ರಾರ್ಥನೆ.
*m