ಕುಮಟಾ : ಭಾಷೆಯು ಬದುಕಿನ ಜೀವದೃವ್ಯವಾಗಿದ್ದು, ಅದನ್ನು ಜೀವಿತದುದ್ದಕ್ಕೂ ಕಲಿಯಾಗುತ್ತಿದ್ದು, ನಿರಂತರವಾದ ಪರಿಶ್ರಮದಿಂದ ಭಾಷಾ ಶುದ್ಧಿ ಮತ್ತು ಸಿದ್ಧಿಯು ಸಾಧ್ಯವೆಂದು ಪ್ರಾಚಾರ್ಯ ಈಶ್ವರ ನಾಯ್ಕ ನುಡಿದರು.
ಅವರು ಕುಮಟಾದ ಡಯಟ್‍ನಲ್ಲಿ ಬೆಳಗಾವಿಯ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ “ಆಲೂರು ವೆಂಕಟರಾವ್ ಭಾಷಾ ಕೌಶಲ ತರಬೇತಿ ಕೇಂದ್ರ”ದ ನಿಯೋಜಿತ ಕಾರ್ಯಕ್ರಮವಾಗಿ “ಪರಿಣಾಮಕಾರಿ ಭಾಷಾ ಬೋಧನೆಯ ತಂತ್ರಾಂಶಗಳು ಮತ್ತು ಇತರ ಅನ್ವಯಿಕಗಳು” ಎಂಬ ವಿಷಯದ ಕುರಿತಾದ “ವಿಚಾರ ಮಂಥನ”ವನ್ನು ಉದ್ಘಾಟಿಸಿ – ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಭಾಷೆಯು ಪ್ರಗತಿಶೀಲವಾದುದು. ಬಳಸಿದಷ್ಟು ಅದು ಪಕ್ವವಾಗುತ್ತದೆ. ಮಾತೃಭಾಷೆಯೊಂದಿಗೆ ಇತರ ಭಾಷೆಗಳಲ್ಲೂ ಹಿಡಿತವನ್ನು ಸಾಧಿಸುವ ಅಗತ್ಯತೆಯು ವರ್ತಮಾನದ ಜಗತ್ತಿನಲ್ಲಿದೆ ಎಂದು ಅವರು ನುಡಿದರು.
ಉಪಪ್ರಾಚಾರ್ಯ ನಾಗರಾಜ ನಾಯಕರವರು ಇತರ ಭಾಷೆಗಳನ್ನು ಕನ್ನಡಿಗರಷ್ಟು ಉದಾರವಾಗಿ ಸ್ವೀಕರಿಸುವ ಬೇರೆ ಭಾಷಿಗರಾರೂ ಇಲ್ಲವೆಂದರು, ಹಿರಿಯ ಉಪನ್ಯಾಸಕ ವ್ಹಿ. ಆರ್. ನಾಯ್ಕ ಕನ್ನಡ ನಾಡು-ನುಡಿಗೆ ಆಲೂರು ವೆಂಕಟರಾಯರ ಕೊಡುಗೆಯನ್ನು ಸ್ಮರಿಸಿ, ಅವರ ಹೆಸರಿನಲ್ಲಿ ರಾಜ್ಯದ ನಾಲ್ಕು ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಗಳಲ್ಲಿ ಭಾಷಾ ಕೌಶಲ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿರುವುದು ಶ್ಲಾಘ್ಯವೆಂದರು. ಸಂಸ್ಕøತ ಅಧ್ಯಾಪಕ ಮಂಜುನಾಥ ಗಾಂವಕರ, ಬರ್ಗಿ ನಿರೂಪಿಸಿದರು.
ಉಪನ್ಯಾಸಕ ನಾಗರಾಜ ಗೌಡ ಸ್ವಾಗತಿಸಿದರು. ಹೊನ್ನಾವರದ ನ್ಯೂ ಇಂಗ್ಲೀಷ್ ಸ್ಕೂಲ್‍ನ ಶಿಕ್ಷಕ ಸೂರಜ್ ಸಿ. ಎ. ವಂದಿಸಿದರು. ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆಯ ಶಿಕ್ಷಕ ರಾಜು ಲಮಾಣ ಪ್ರಾರ್ಥಿಸಿದರು. ಹೊನ್ನಾವರದ ಸೇಂಟ್ ಥಾಮಸ್ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಬಿ. ಎಮ್. ಭಟ್ಟ ವಿಚಾರ ಮಂಥನದಲ್ಲಿ ವಿಷಯವನ್ನು ಮಂಡಿಸಿದರು.