ಕುಮಟಾ : “ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ” ಎಂಬ ಉಕ್ತಿಯಂತೆ ಮಾನವನ ಎಲ್ಲ ಅಂಗಗಳಲ್ಲಿ ಕಣ್ಣು ಅತಿ ಮುಖ್ಯವಾದ ಹಾಗೂ ಸೂಕ್ಷ್ಮವಾದ ಅಂಗ. ಮನುಷ್ಯನಿಗೆ ಸ್ಪಷ್ಟ ಕಣ್ಣಿನ ದೃಷ್ಟಿ ಬಹಳ ಮುಖ್ಯ. ದೃಷ್ಟಿ ಹೀನತೆ ಒಂದು ಶಾಪದಂತೆ. ಕುರುಡುತನವನ್ನು ಅಥವಾ ಅಂಧತ್ವವನ್ನು ಹೋಗಲಾಡಿಸುವುದು ಅತಿ ಶ್ರೇಷ್ಠ ವಾದ ಕೆಲಸ.ಅಂತಹ ಶ್ರೇಷ್ಠ ಕೆಲಸವನ್ನು ಕಳೆದ ಹದಿನೈದು ವರ್ಷಗಳಿಂದ ಕುಮಟಾದ ಲಾಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆಯು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸ್ಮರಣಾರ್ಹ ಸಂಗತಿ ಎಂದು ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಡಾ.ಜಿ.ಜಿ.ಹೆಗಡೆ ಅಭಿಪ್ರಾಯಿಸಿದರು.
ಅವರು ಗುರುವಾರ ಕುಮಟಾ ಸಮೀಪದ ದೇವರಬೋಳೆ ದೇವಸ್ಥಾನವು ಸ್ಥಳಿಯ ಸಾರ್ವಜನಿಕರಿಗಾಗಿ ಹಮ್ಮಿಕೊಂಡ ಉಚಿತ ನೇತ್ರ ತಪಾಸಣೆ ಮತ್ತು ಉಚಿತ ಶಸ್ತ್ರಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಬಿರ ಉದ್ಘಾಟಿಸಿದ ಲಾಯನ್ಸ್ ಹ್ಯುಮೆನಿಟೇರಿಯನ್ ಸರ್ವೀಸ್ ಟ್ರಸ್ಟ್ ನ ಚೇರಮನ್ ದೇವಿದಾಸ ಡಿ.ಶೇಟ್ ರವರು ಮಾತನಾಡಿ ಆಸ್ಪತ್ರೆಯ ಸೇವಾ ಸೌಲಭ್ಯ ವಿವರಿಸಿ ಇವುಗಳ ಸದುಪಯೋಗ ಪಡೆಯಲು ಕರೆ ನೀಡಿದರು.
ಕುಮಟಾ ಲಾಯನ್ಸ್ ಕ್ಲಬ್ ಅಧ್ಯಕ್ಷ ವಿನಯಾ ಎಸ್.ಹೆಗಡೆ ಲಾಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯ ‘ದೃಷ್ಟಿ ಮೊದಲು’ ಧ್ಯೇಯ ವಾಕ್ಯದ ಕುರಿತು ವಿವರಿಸಿದರು. ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಡಾ.ಸಿ.ಎಸ್.ವೇರ್ಣೇಕರ, ವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನ,ಲಾ.ಪ್ರೇಮಾನಂದ ಶಾನಭಾಗ,ಲಯನ್ಸ್ ಕ್ಲಬ್ ಕಾರ್ಯ ದರ್ಶಿ ಪ್ರೊ.ಎಸ್.ಎಸ್.ಹೆಗಡೆ,ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ದೇವಿದಾಸ ಡಿ.ಶೇಟ್,ಡಾ.ಸಿ.ಎಸ್.ವೇರ್ಣೇಕರ,ವಿನಯಾ ಎಸ್.ಹೆಗಡೆ,ಡಾ.ಮಲ್ಲಿಕಾರ್ಜುನ ಅವರನ್ನು ಧರ್ಮದರ್ಶಿ ಡಾ.ಜಿ.ಜಿ.ಹೆಗಡೆ ಸನ್ಮಾನಿಸಿದರು.
ದೇವರಬೋಳೆ,ಲುಕ್ಕೇರಿ,ಮಾಸೂರು,ಹೆಗಡೆ,ತಣ್ಣೀರಕುಳಿ ಮುಂತಾದ ಹಳ್ಳಿಗಳ 40 ಕ್ಕೂ ಅಧಿಕ ಬಡ ನಿವಾಸಿಗಳು ಶಿಬಿರಾರ್ಥಿಗಳಾಗಿ ಪಾಲ್ಗೊಂಡರು.
ಆರಂಭದಲ್ಲಿ ಕು.ಅರ್ಪಿತಾ ನಾಯಕ ಪ್ರಾರ್ಥಿಸಿದರು.ಶ್ರೀಮತಿ ನಿಶಾ ನಾಯಕ ಲುಕ್ಕೇರಿ ಸ್ವಾಗತಿಸಿದರು.ಕಾರ್ಯಕ್ರಮ ನಿರೂಪಿಸಿದ ಜಯದೇವ ಬಳಗಂಡಿ ಕೊನೆಯಲ್ಲಿ ವಂದಿಸಿದರು.