ಹೊನ್ನಾವರ : ತಾಲೂಕಿನ ಹಳದೀಪುರ ಹಾಗೂ ಅಗ್ರಹಾರದಲ್ಲಿ ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿದ್ದು ಇದೀಗ ಭಾರೀ ಸುದ್ದಿಯಾಗಿದೆ. ಅಲ್ಲಲ್ಲಿ ಅಂಗಡಿ ಕಳ್ಳತನ ಪ್ರಕರಣಗಳು ಈ ಹಿಂದೆ ಸಂಭವಿಸಿತ್ತಾದರೂ ಈ ತರಹ ಸರಣಿ ಕಳ್ಳತನವಾಗಿದ್ದು ಇದೇ ಮೊದಲಾಗಿದೆ.
ಹಳದೀಪುರದ ಜೋಗಣಿಕಟ್ಟೆ ಕ್ರಾಸ್ ಬಳಿ ಇರುವ ಮೂರು ಅಂಗಡಿಗಳಲ್ಲಿ ಕಳ್ಳರು ತಮ್ಮ ಕರಾಮತ್ತು ತೋರಿದ್ದಾರೆ. ಅದಲ್ಲದೆ ಅಗ್ರಹಾರದಲ್ಲಿ ಒಂದು ಅಂಗಡಿ ಹಾಗೂ ಕರ್ಕಿಯಲ್ಲಿ ಒಂದು ಅಂಗಡಿ ಕಳ್ಳತನವಾದ ಬಗ್ಗೆ ಸತ್ವಾಧಾರ ನ್ಯೂಸ್ ಗೆ ಸ್ಥಳೀಯ ಮಾಹಿತಿ ಲಭ್ಯವಾಗಿದೆ.
ಅಂಗಡಿಗಳಲ್ಲಿ ಇದ್ದ ನಗದು ಹಾಗೂ ಕೆಲವು ವಸ್ತುಗಳನ್ನು ಕಳ್ಳತನ ಮಾಡಿರುವ ಬಗ್ಗೆ ಸ್ಥಳೀಯ ಮಾಹಿತಿ ಲಭ್ಯವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಅಗ್ರಹಾರ ದೇವಾಲಯದಲ್ಲಿ ಕಳ್ಳತನ ನಡೆದಿತ್ತು, ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ನಂತರದಲ್ಲಿ ನವಿಲಗೋಣ ಕ್ರಾಸ್ ನಲ್ಲಿ ಅಂಗಡಿ ಕಳ್ಳತನ ಪ್ರಕರಣ ವರದಿಯಾಗಿತ್ತು.
ಬೈಕ್ ಹಾಗೂ ಅಂಗಡಿಯಲ್ಲಿದ್ದ ನಗದು ಮತ್ತು ಕೆಲವು ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ. ಮಾಲಿಕರು ಬೆಳಿಗ್ಗೆ ಬಂದು ಅಂಗಡಿಯ ಬಾಗಿಲು ತೆರೆದಾಗ ಕಳ್ಳತನವಾದಬಗ್ಗೆ ತಿಳಿದುಬಂದಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದೀಗ ಈ ಸರಣಿ ಕಳ್ಳತನ ಜನತೆಯ ನಿದ್ದೆ ಗೆಡಿಸಿದೆ. ಈ ಕೃತ್ಯದ ಹಿಂದೆ ಹಲವು ಜನರ ತಂಡ ಇರಬಹುದೆಂದು ಅಂದಾಜಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿಯ ಅಗತ್ಯ ಮಾಹಿತಿ ಸಂಗ್ರಹ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.ಪೊಲೀಸರು ಕಳ್ಳರನ್ನು ಹೆಡೆಮುರಿ ಕಟ್ಟುವ ಭರವಸೆಯಿದ್ದು ತನಿಖೆಯ ನಂತರ ಪೂರ್ಣ ಮಾಹಿತಿ ಲಭ್ಯವಾಗಲಿದೆ.
ವರದಿ : ಸ್ಥಳೀಯ ಮಾಹಿತಿ ಆಧರಿಸಿದೆ.