ಅಂಕೋಲಾ: ತಾಲೂಕಿನ ಅಗಸೂರು ಬಳಿ ರಬ್ಬರ್ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೋರ್ವ ಗಾಯಗೊಂಡ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಟೈಯರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಇನ್ನು ಅಪಘಾತದಲ್ಲಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಚಾಲಕ ಲಾರಿ ಅಡಿಯಲ್ಲಿಯೇ ಸಿಲುಕಿ ಸುಮಾರು ಒಂದು ಘಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ, ಸ್ಥಳೀಯರು ಹರಸಾಹಸ ಪಟ್ಟು ಮೃತದೇಹವನ್ನು ಮೇಲಕ್ಕೆ ಎತ್ತಿದರು.ಕ್ರೇನ್ ಮೂಲಕ ಲಾರಿಯ ಒಂದು ಭಾಗ ಸ್ವಲ್ಪ ಮೇಲಕ್ಕೆತ್ತಿ , ಮೃತದೇಹ ಪಕ್ಕಕ್ಕೆ ಸರಿಸಲಾಯಿತು.
ಕೇರಳದಿಂದ ರಬ್ಬರ್ ತುಂಬಿಕೊಂಡು ಹೊರಟಿದ್ದ ಲಾರಿ ನಾಸಿಕ ತಲುಪಬೇಕಿತ್ತಾದರೂ, ಅಂಕೋಲಾ- ಹುಬ್ಬಳ್ಳಿ ಮಾರ್ಗ ಮಧ್ಯೆ ಅಗಸೂರು ಬಳಿ ಪಲ್ಟಿಯಾಗಿದೆ.
ರಸ್ತೆ ಮಧ್ಯದಲ್ಲಿ ಸಂಭವಿಸಿದ ಈ ಅಪಘಾತದಿಂದ ಎರಡು ಗಂಟೆಗಳಿಗೂ ಅಧಿಕ ಕಾಲ ಹೆದ್ದಾರಿಯಲ್ಲಿ ಸಂಚಾರಕ್ಕೆ ವ್ಯತ್ಯಯವಾಯಿತು. ಲಾರಿಯನ್ನು ರಸ್ತೆಯಿಂದ ತೆರವುಗೊಳಿಸಲು ಕ್ರೇನ್ ಬಳಸಿ ಸಂಚಾರಕ್ಕೆ ಅನುವು ಮಾಡಿಕೊಡಲು ಪೊಲೀಸರೊಂದಿಗೆ ಸ್ಥಳೀಯರು ಸಹಕರಿಸಿದರು. ಸಿಪಿಐ ಕೃಷ್ಣಾನಂದ ನಾಯಕ ಮಾರ್ಗದರ್ಶನದಲ್ಲಿ ಪಿಎಸ್‌ಐ ಪ್ರೇಮನಗೌಡ ಪಾಟೀಲ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.