ಆಯುರ್ವೇದ ವೈದ್ಯರಿಗೆ ಭಾಷಾತಜ್ಞರ ಪಾಟೀಸವಾಲು
ಬಯಲಾಟ ಅಕಾಡೆಮಿಯ ಅಧ್ಯಕ್ಷರ ಸರಳತೆ ಕೊಂಕಣಿ ಅಕಾಡೆಮಿಯ ಅಧ್ಯಕ್ಷರಿಗೆ ಪಾಠವಾಗಲಿ.
ನೈತಿಕ ಹೊಣೆಹೊತ್ತು ಹಣ ಮರುಪಾವತಿಸಲು ಕೊಂಕಣಿ ಅಕಾಡೆಮಿಯ ಅಧ್ಯಕ್ಷರಾದ ಡಾ. ಜಗದೀಶ ಪೈರವರಿಗೆ ತ್ರಿಭಾಷಾ ಸಾಹಿತಿ ಡಾ. ಅರವಿಂದ ಶ್ಯಾನಭಾಗರಿಂದ ಆಗ್ರಹ.
ಕೊಂಕಣಿ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ರಕ್ಷಣೆ ಮಾಡಬೇಕಿದ್ದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಪ್ರಸಕ್ತ ಸಮಿತಿಯು ಅದನ್ನು ಬಿಟ್ಟು ಭಾರೀ ವೆಚ್ಚದ ಸಮ್ಮೇಳನಗಳ ಆಯೋಜನೆಯ ಮೂಲಕ ಸರಕಾರದ ಹಣವನ್ನು ಪೋಲು ಮಾಡುವಲ್ಲಿ ನಿರತವಾಗಿದೆ.
ಈ ಹಿಂದೆ ಕಾರ್ಕಳದಲ್ಲಿ ಆಯೋಜಿಸಿದ್ದ ಅಕಾಡೆಮಿಯ ಬೆಳ್ಳಿಹಬ್ಬದ ಕಾರ್ಯಕ್ರಮದ ಖರ್ಚು-ವೆಚ್ಚವನ್ನು ಗಮನಿಸಿದರೆ
ಎಂಥವರನ್ನೂ ಹುಬ್ಬೇರಿಸುವಂತೆ ಮಾಡುತ್ತದೆ. ಎರಡು ದಿನದ ಈ ಕಾರ್ಯಕ್ರಮಕ್ಕೆ 30,36,728=00 ರೂ. ಖಾಲಿಯಾಗಿದೆ. ಅಧ್ಯಕ್ಷರ ಪ್ರಯಾಣ ಭತ್ಯೆಯ ವೆಚ್ಚವನ್ನು ನೋಡಿದರೆ ಮೂಗಿಗಿಂತ ಮೂಗುತಿಯೇ ಭಾರ ಎನ್ನುವಂತಾಗಿದೆ. ಕಳೆದ ಒಂದುವರೆ ವರ್ಷದಲ್ಲಿ ಸುಖಾಸುಮ್ಮನೆ ಅಧ್ಯಕ್ಷರ ಪ್ರಯಾಣ ಭತ್ಯೆಯೇ 6,38,880=00 ರೂಪಾಯಿ ಆಗಿದೆ. ಲಾಕ್ ಡೌನ್ ಸಂದರ್ಭದಲ್ಲಿಯೂ ಎರಡು ತಿಂಗಳು ಮನೆಯಲ್ಲಿ ಕುಳಿತು ಪ್ರಯಾಣ ಮಾಡದೇ ನವೀನಚಂದ್ರರವರ ಹೆಸರಿನಲ್ಲಿ ಉಡುಪಿ ಆರ್.ಟಿ.ಒ. ನೋಂದಣಿ ಇರುವ ಖಾಸಗಿ ಟ್ರಾವೆಲ್ ಹೆಸರಿನಲ್ಲಿ ಒಂದೂವರೆ ಲಕ್ಷ ಪ್ರಯಾಣ ಭತ್ಯೆಯನ್ನು ಪಾವತಿಸಿದೆ. ಪ್ರವಾಸವನ್ನು ಮಾಡಿದ್ದು ನಿಜವಾದಲ್ಲಿ ಅಧ್ಯಕ್ಷರು ದಾಖಲೆಗಳನ್ನು ಬಹಿರಂಗಪಡಿಸಲಿ. ಇಲ್ಲವಾದರೆ ಅಕ್ರಮವಾಗಿ ಪಡೆದ ಹಣವನ್ನು ಸರಕಾರದ ಖಜಾನೆಗೆ ಮರುಪಾವತಿಸಲಿ ಎಂದು ಅಕಾಡೆಮಿಯ ಮಾಜಿ ಸದಸ್ಯ ಕೊಂಕಣಿ ಸಾಹಿತಿ ಡಾ. ಅರವಿಂದ ಶ್ಯಾನಭಾಗ ಆಗ್ರಹಿಸಿದ್ದಾರೆ.
“ಕೊoಕ್ಣಿ ಲೋಕಾoನೊ ಏಕ್ ಜಾಯಾ, ಕರ್ನಾಟಕ ಕೊoಕ್ಣಿ ಸಾಹಿತ್ಯ್ ಅಕಾಡೆಮಿ ಅಧ್ಯಕ್ಷಾಕ್ ಆತ್ತಾoಚ್ ಧಾoವ್ಡಾಯಾ!” ಎನ್ನುವದಾಗಿ ಅಧ್ಯಕ್ಷರನ್ನು ಅಕಾಡೆಮಿಯಿಂದ ಓಡಿಸುವಂತೆ ದೂರದ ಅಮೇರಿಕಾ ದೇಶದಿಂದ -ಡಾ. ಆಸ್ಟಿನ್ ಪ್ರಭು, ಚಿಕಾಗೊರವರು ಕರೆ ನೀಡಿದ್ದಾರೆ.
ಲಾಕ್ ಡೌನ್ ವೇಳೆಯ ಪ್ರಯಾಣ ಭತ್ಯೆಯನ್ನು ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ. ಜಗದೀಶ್ ಪೈ ಪಡೆದಿರುವುದು ನಾಚಿಕೆಗೇಡಿನ ಸಂಗತಿ. ಇದು ತಪ್ಪು ಸಂಪ್ರದಾಯಕ್ಕೆ ನಾಂದಿ ಹಾಡಿದಂತೆ ಆಗಿದೆ. ಈ ಕುರಿತು ಉಳಿದ ಅಕಾಡೆಮಿಯ ಅಧ್ಯಕ್ಷರು ಲಾಕ್ ಡೌನ್ ಅವಧಿಯಲ್ಲಿ ಏನು ಮಾಡಿದ್ದಾರೆ ಎಂಬುದನ್ನು ಮಾಹಿತಿ ಹಕ್ಕಿನಡಿ ಪಡೆದುಕೊಳ್ಳುತ್ತಿದ್ದು ಈಗಾಗಲೇ ಕರ್ನಾಟಕ ಬಯಲಾಟ ಅಕಾಡೆಮಿಯ ಮಾಹಿತಿ ದೊರಕಿದ್ದು, ಸರಕಾರವೇ ನೇಮಿಸಿದ ಈ ಅಕಾಡೆಮಿಯ ಅಧ್ಯಕ್ಷರು ಒಂದೇ ಒಂದು ರೂಪಾಯಿ ಆ ವೇಳೆಯಲ್ಲಿ ಪ್ರಯಾಣಭತ್ಯೆಯನ್ನು ಪಡೆಯದೇ ಆದರ್ಶ ಮೆರೆದಿದ್ದಾರೆ. ಅಷ್ಟೇ ಅಲ್ಲದೇ, 2020 ಎಪ್ರಿಲ್, ಮೇ ತಿಂಗಳುಗಳಲ್ಲಿ ಮಾಸಿಕ ಗೌರವಧನ (25000*2=50000=00)ವನ್ನೂ ಬಯಲಾಟ ಅಕಾಡೆಮಿಯ ಅಧ್ಯಕ್ಷರು ಪಡೆದಿಲ್ಲವೆನ್ನುವದು ಮಾಹಿತಿ ಹಕ್ಕಿನಿಂದ ತಿಳಿದುಬಂದಿದೆ. ಬಯಲಾಟ ಅಕಾಡೆಮಿಯ ಅಧ್ಯಕ್ಷರ ಪ್ರಾಮಾಣಿಕತೆ ಉಳಿದವರಿಗೂ ಮಾದರಿ ಆಗಬೇಕಿದೆ.
ಪಾರದರ್ಶಕತೆಗೆ ಹೆಸರಾದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಸಂಘ ಪರಿವಾರದ ಶುದ್ಧ, ಸಚ್ಚಾರಿತ್ರ್ಯದ ಗರಡಿಯಲ್ಲಿ ಪಳಗಿದವರಾಗಿದ್ದರೂ, ಸರ್ವಸದಸ್ಯರ ಸಭೆಯಲ್ಲಿ ಹಣವನ್ನು ಮರಳಿಸುತ್ತೇನೆ ಎಂದು ಒಪ್ಪಿಕೊಂಡು ಒಂದು ತಿಂಗಳು ಕಳೆದರೂ ಇನ್ನೂ ಹಣ ಮರುಪಾವತಿಸದಿರುವದು
ನೋವಿನ ಸಂಗತಿ ಆಗಿದೆ. ಬೇರೆ ಅಕಾಡೆಮಿಯನ್ನು ನೋಡಿಯಾದರೂ ಅಧ್ಯಕ್ಷರು ಪಾಠ ಕಲಿಯದಿದ್ದರೆ 27 ವರ್ಷಗಳ ಇತಿಹಾಸವಿರುವ ಕೊಂಕಣಿ ಅಕಾಡೆಮಿಯ ಗೌರವ ರಕ್ಷಣೆಗಾಗಿ ಕಾನೂನಾತ್ಮಕ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ. ಈಗಾಗಲೇ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಅಧ್ಯಕ್ಷರ ವರ್ತನೆಯು ಸಾರ್ವಜನಿಕರ ತೀವ್ರ ಅಸಹನೆಗೆ ಕಾರಣವಾಗಿದ್ದು ಕೊಂಕಣಿ ಭಾಷಿಕರಿಗೆ ಇದರಿಂದ ಆಗುತ್ತಿರುವ ಮುಜುಗರವನ್ನು ತಪ್ಪಿಸಬೇಕಾಗಿದೆ ಎಂದು ಸಾಮಾಜಿಕ ಚಿಂತಕ ಡಾ. ಅರವಿಂದ ಶ್ಯಾನಭಾಗರು ಅಭಿಪ್ರಾಯ ಪಟ್ಟಿದ್ದಾರೆ.