ಭಟ್ಕಳ: ತಕ್ಕಮಟ್ಟಿಗೆ ಅಕ್ರಮ ಗೋ ಸಾಗಾಟದ ವಿಷಯ ಕಡಿಮೆಯಾಗಿದೆ ಎಂದುಕೊಳ್ಳುತ್ತಿರುವಾಗಲೇ ಮತ್ತೆ ಆ ಕುರಿತಾದ ಸುದ್ದಿ ಇದೀಗ ಸದ್ದು ಮಾಡುತ್ತಿದೆ.
ಮಾರುತಿ ಬ್ಯಾಲೆನೊ ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವ್ಯಕ್ತಿಯೊರ್ವನನ್ನು ವಾಹನ ಸಮೇತ ಭಟ್ಕಳ ಗ್ರಾಮೀಣಾ ಪೊಲೀಸರು ವಶಕ್ಕೆ ಪಡೆದು ಗೋಹತ್ಯಾ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಜಾಲಿ ತಗ್ಗರಗೋಡ ನಿವಾಸಿ ಹಬೀಬುಲ್ಲಾ ಅಹ್ಮದ್ ಎಂದು ಗುರುತಿಸಲಾಗಿದೆ.
ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ಶುಕ್ರವಾರ ತಡರಾತ್ರಿ ಬೆಣಂದೂರು ಕೋಳಿ ಕೂಗು ದೇವಸ್ಥಾನದ ಬಳಿ ಬೀಟ್‌ನಲ್ಲಿದ್ದಾಗ ತಪಾಸಣೆಗಾಗಿ ಆರೋಪಿಯ ಕಾರನ್ನು ನಿಲ್ಲಿಸಿದ್ದಾರೆ. ಕಾರನ್ನು ನಿಲ್ಲಿಸದೆ ಪರಾರಿಯಾದ ಆರೋಪಿಯ ಮೇಲೆ ಅನುಮಾನಗೊಂಡ ಪೊಲೀಸರು ಬೆನ್ನಟ್ಟಿ ಆರೋಪಿಯನ್ನು ಹಿಡಿದಿದ್ದಾರೆ ಎನ್ನಲಾಗಿದೆ.
ಬಂಧಿತ ಆರೋಪಿ ಕಾರನಲ್ಲಿ ಅಕ್ರಮವಾಗಿ ಎತ್ತಿನ ಮರಿಯನ್ನು ಸಾಗಾಟ ಮಾಡುತ್ತಿರುವದು ಕಂಡು ಪೊಲೀಸರು ಅದನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.