ಕುಮಟಾ : ಕೋವಿಡ್ 19 ಎಗ್ಗಿಲ್ಲದೆ ಎಲ್ಲೆಡೆ ಹರಡುತ್ತಿದೆ. ಒಂದೆಡೆಗೆ ಒಂದು ಪ್ರಕರಣ ಇದ್ದುದು ಇದೀಗ ನೂರರ ಲೆಕ್ಕದಲ್ಲಿ ಮುಂದುವರೆದಿದೆ. ಪ್ರಾಣಹಾನಿಗಳೂ ಸಾಕಷ್ಟು ಆಗಿರುವುದು ಈಗಾಗಾಲೇ ತಿಳಿದ ವಿಚಾರ, ಆದರೂ ಇದೆಲ್ಲರ ನಡುವೆ ಜನತೆ ಮಾತ್ರ ಮೈ ಮರೆತಿರುವುದು ವಿಪರ್ಯಾಸ.
ನಿತ್ಯವೂ ಇಷ್ಟೊಂದು ಪ್ರಕರಣಗಳು ಪತ್ತೆಯಾಗುತ್ತಿವೆ ಎಂದರೆ, ಇನ್ನೂ ಪರೀಕ್ಷೆಗೊಳಪಡದ ಸೋಂಕಿತರ ಸಂಖ್ಯೆ ಅಪಾರವಾಗಿದೆ ಎಂದೇ ಅರ್ಥ. ಈಗಲೂ ಜನರು ಅಜಾಗರೂಕರಾಗಿದ್ದರೆ ಮುಂದೊಂದುದಿನ ನಮ್ಮವರನ್ನೋ ಅಥವಾ ನಮ್ಮ ಜೀವವನ್ನೋ ತೆರಬೇಕಾದೀತು ಎಚ್ಚರ..!
ಪರಿಸ್ಥಿತಿ ಹೀಗೆ ಏಕಾಏಕಿ ಬಿಗಡಾಯಿಸಿರುವಾಗಲೇ, ರೋಗದ ಕುರಿತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜನರಲ್ಲಿ ಅಸಾಧಾರಣ ಅಸಡ್ಡೆ ಎದ್ದು ಕಾಣಲಾರಂಭಿಸಿದೆ. ಪ್ರತಿ ಊರಿನಲ್ಲೂ ಇಂಥದ್ದೇ ಚಿತ್ರಣವಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವುದು ನೆಪಮಾತ್ರಕ್ಕೆ, ಮಾಸ್ಕ್ ಧರಿಸುವುದು ಪೊಲೀಸರ ಭಯಕ್ಕೆ ಎಂಬಂತಾಗಿದೆ. ನಿಜ, ಕೋವಿಡ್ 19 ಮಾರಣಾಂತಿಕವಲ್ಲ ಎನ್ನುವುದು ಸತ್ಯವೇ ಆದರೂ, ರಾಜ್ಯದಲ್ಲಿ ಕೋವಿಡ್ ಮರಣದರ 2 ಪ್ರತಿಶತದಷ್ಟಿದೆಯಾದರೂ, ಹಾಗೆಂದು ಇದಕ್ಕೆ ಅಸಡ್ಡೆಯೇ ಉತ್ತರವಾಗಬಾರದಲ್ಲವೇ? ಮರಣ ದರ ಕಡಿಮೆ ಇದೆ ಎಂದರೂ, ಇದರಿಂದಾಗಿ ಸಾವಿರಾರು ಜನ ರಾಜ್ಯದಲ್ಲಿ ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಯೊಂದು ಜೀವವೂ ಅಮೂಲ್ಯವೇ ಅಲ್ಲವೇ?
ಕೋವಿಡ್ ಆರೋಗ್ಯಯುತ ವ್ಯಕ್ತಿಯ ಮೇಲೆ ಅಷ್ಟಾಗಿ ವ್ಯತಿರಿಕ್ತ ಪರಿಣಾಮ ತೋರುವುದಿಲ್ಲ ಎಂದಾಕ್ಷಣ, ಅದರಿಂದ ಬೇರೆಯವರಿಗೆ ಅಪಾಯವೇ ಆಗುವುದಿಲ್ಲ ಎಂದರ್ಥವೇ. ಅನೇಕ ಕುಟುಂಬಗಳಲ್ಲಿ ವಯಸ್ಸಾದವರಿರುತ್ತಾರೆ, ಹೃದ್ರೋಗ, ಶ್ವಾಸಕೋಶ ಸಂಬಂಧಿ ತೊಂದರೆ, ಅಧಿಕ ಶುಗರ್‌ನಂಥ ಸಮಸ್ಯೆಗಳಿಂದ ಬಳಲುವವರು ಇರುತ್ತಾರೆ. ಅಂಥವರ ಕಾಳಜಿ ಮಾಡುವ ಬೃಹತ್ ಜವಾಬ್ದಾರಿ ಸಮಾಜದ ಮೇಲಿದೆ.
ನಾಲ್ಕು ಜನರಿರುವ ಕುಟುಂಬದಲ್ಲಿ, ಮೂರು ಜನ ತ್ವರಿತವಾಗಿ ಚೇತರಿಸಿಕೊಂಡು, ಒಬ್ಬರಿಗೆ ರೋಗ ಮಾರಣಾಂತಿಕವಾದರೂ ಅದು ನೋವಿನ ವಿಷಯವಲ್ಲವೇ? ನನಗೇನೂ ಆಗುವುದಿಲ್ಲ ಎಂದು ಅನೇಕರು ನಿರ್ವಿಘ್ನವಾಗಿ ಓಡಾಡುತ್ತಿದ್ದಾರೆ. ಅವರಿಗೆ ಸೋಂಕು ತಗಲಿದರೂ ಏನೂ ಆಗದೇ ಇರಬಹುದು, ಆದರೆ ಅವರಿಂದಾಗಿ ಆರೋಗ್ಯ ಸಮಸ್ಯೆಗಳಿರುವ ಇನ್ನೊಬ್ಬರಿಗೆ ಈ ರೋಗ ಹರಡಿದರೆ?
ನಿರ್ಬಂಧಗಳು ಸಡಿಲವಾಗಿವೆ ಎಂದಾಕ್ಷಣ, ರೋಗದ ಅಪಾಯ ತಗ್ಗಿದೆ ಎಂದರ್ಥವಲ್ಲ. ಎಲ್ಲರೂ ನಿರ್ವಿಘ್ನವಾಗಿ ಅಡ್ಡಾಡುತ್ತಿದ್ದಾರೆ ಎಂದಾಕ್ಷಣ, ಸಾಂಕ್ರಾಮಿಕದ ಅಪಾಯ ದೂರವಾಗಿದೆ ಎಂದರ್ಥವಲ್ಲ. ನಿರ್ಬಂಧ ಸಡಿಲಿಕೆಗಳು ಆರ್ಥಿಕ ಯಂತ್ರಕ್ಕೆ ಮರುಚಾಲನೆ ಕೊಡುವುದಕ್ಕಾಗಿ ತೆಗೆದುಕೊಳ್ಳಲಾದ ಕ್ರಮವಷ್ಟೇ ಎನ್ನುವುದು ನೆನಪಿರಲಿ.
ಲಾಕ್ ಡೌನ್, ಸೀಲ್ ಡೌನ್ ಗಳು ಕೇವಲ ಸರಕಾರದಿಂದ ಆಗಬೇಕು ಎಂಬುದಲ್ಲ. ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಕಾರ್ಯ ಆಗಬೇಕಿದೆ ಅಲ್ಲವೇ..? ನಮ್ಮವರ ಉಳಿವಿಗಾಗಿ ನಾವೂ ಜಾಗೃತರಾಗೋಣ.