ಕಾರವಾರ: ಕಳೆದ ಐದು ವರ್ಷದಿಂದ ಮುಂಡಗೋಡ ತಾಲೂಕಿನಲ್ಲಿ ಕನ್ನಡ ಪರಿಚಾರಿಕೆಯನ್ನು ತುಂಬ ಉತ್ಸಾಹದಿಂದ ಮಾಡಿ ಜನ ಮೆಚ್ಚುಗೆಯನ್ನು ಗಳಿಸಿದ ತಾಲೂಕು ಕ.ಸಾ.ಪ. ಘಟಕದ ಅಧ್ಯಕ್ಷ ಡಾ. ನಾಗೇಶ ಪಾಲನಕರ ಅವರ ಅನಿರೀಕ್ಷಿತ ನಿಧನ ತುಂಬ ನೋವು ತಂದಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.
ಡಾ. ನಾಗೇಶ ಪಾಲನಕರ ಅವರು ಹಳ್ಳಿ ಹಳ್ಳಿಗಳಲ್ಲಿ ಸಾಹಿತ್ಯ ಪರಿಷತ್ ಕಾರ್ಯಕ್ರಮ ಮಾಡುವುದರ ಮೂಲಕ ಸ್ಥಳೀಯರು ಕನ್ನಡದ ಸಡಗರದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು. ತಮ್ಮ ಅನಾರೋಗ್ಯದ ನಡುವೆಯೂ ಜನರ ಸಹಕಾರದಲ್ಲಿ ಎರಡು ತಾಲೂಕು ಸಾಹಿತ್ಯ ಸಮ್ಮೇಳನವನ್ನು ಇಂದೂರು ಮತ್ತು ಕರಗಿನಕೊಪ್ಪದಲ್ಲಿ ಸಂಘಟಿಸಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದರು. ಈ ನೆಲ ನಾಗೇಶ ಪಾಲನಕರ ಕನ್ನಡ ಸೇವೆಯನ್ನು ಸದಾ ನೆನಪಿಸಿಕೊಳ್ಳುತ್ತದೆ.
ಕ.ಸಾ.ಪ. ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ ಅವರು ನಾಗೇಶ ಪಾಲನಕರ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಪಾಲನಕರ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯ ಗುರುವಾರ ಮುಂಜಾನೆ 8 ಗಂಟೆಗೆ ನಡೆಯಲಿದ್ದು, ತಾವು ಈ ಸಂದರ್ಭದಲ್ಲಿ ಜಿಲ್ಲಾ ಕ.ಸಾ.ಪ. ಪರವಾಗಿ ಅಂತಿಮ ಗೌರವ ಅರ್ಪಿಸುತ್ತೇನೆ ಎಂದು ಕರ್ಕಿಕೋಡಿ ತಿಳಿಸಿದ್ದಾರೆ.