ಕುಮಟಾ : ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ನಡೆಸುತ್ತ ,ಈ ಶಿಬಿರಗಳಲ್ಲಿ ಆಯ್ಕೆಯಾಗುವ ಅರ್ಹ ಬಡ ವೃದ್ಧರಿಗೆ ಉಚಿತ ಕಣ್ಣುಪೊರೆ(ಮೋತಿಬಿಂದು) ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ತಾಲೂಕಿನ ಲಾಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯು ಬರುವ ಮೇ 2021 ತಿಂಗಳಿನ ತನ್ನ ಉಚಿತ ಶಿಬಿರಗಳನ್ನೆಲ್ಲವನ್ನೂ ಮುಂದೂಡಿದೆ.
ತಿಂಗಳಿನ ಮೊದಲ ಗುರುವಾರ,ಮೂರನೇಯ ಗುರುವಾರ ಹಾಗೂ ನಾಲ್ಕನೇಯ ಗುರುವಾರಗಳಂದು ಕ್ರಮವಾಗಿ ಕುಮಟಾ,ಗೋಕರ್ಣ,ಅಂಕೋಲಾ,ಹೊನ್ನಾವರ ಮತ್ತು ಭಟ್ಕಳಗಳಲ್ಲಿ ನಡೆಸಬೇಕಿದ್ದ ಉಚಿತ ಕಣ್ಣು ತಪಾಸಣೆ ಶಿಬಿರ ಮತ್ತು ಉಚಿತ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ತನ್ನ ಸಾಮಾಜಿಕ ಜವಾಬ್ದಾರಿಗಳನ್ನು ಮನಗಂಡು ಕೊರೋನಾ ಮುನ್ನೆಚ್ಚರಿಕಾ ಕ್ರಮವಾಗಿ ಮುಂದೂಡಿದೆ ಎಂದು ಲಾಯನ್ಸ್ ಹ್ಯುಮನಿಟೇರಿಯನ್ ಸರ್ವೀಸ್ ಟ್ರಸ್ಟ್ ನ ಚೇರಮನ್ ದೇವಿದಾಸ ಡಿ.ಶೇಟ್ ಪತ್ರಿಕಾ ಪ್ರಕಟಣೆ ಯ ಮೂಲಕ ತಿಳಿಸಿದ್ದಾರೆ.
ಜನತೆಗೆ ಅಗತ್ಯ ಸೇವೆ ಕೊಡುವ ನಿಟ್ಟಿನಲ್ಲಿ ಸಂಸ್ಥೆ ಸದಾ ಕಾರ್ಯ ಕೈಕೊಳ್ಳುತ್ತಿದ್ದು ಸರಕಾರದ ಎಲ್ಲ ನಿಯಮಾವಳಿಗಳ ಪಾಲನೆಯೊಂದಿಗೆ ಕುಮಟಾ ವಿದ್ಯಾಗಿರಿಯಲ್ಲಿನ ತಮ್ಮ ಸಂಸ್ಥೆಯ ಆಸ್ಪತ್ರೆಯು ಎಂದಿನಂತೆ ಕಾರ್ಯನಿರ್ವಹಿಸಲಿದೆ. ಉಚಿತ ಶಿಬಿರಗಳನ್ನು ಪುನಃ ಆರಂಭಿಸುವಾಗ ಪತ್ರಿಕಾ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗುವುದು.
ಕೋವಿಡ್ 19 ಮುಂಜಾಗೃತಿಯ ಕ್ರಮವಾಗಿ ಕೈಕೊಂಡ ಈ ಬದಲಾವಣೆಯನ್ನು ಸಾರ್ವಜನಿಕರು ಗಮನಿಸಿ ಸಹಕರಿಸುವುದರ ಜೊತೆಗೆ ಈ ಕೋವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟಿ ನಿರ್ಮೂಲನೆ ಮಾಡಲು ಸರಕಾರವು ನಿರ್ದೇಶಿಸಿದ ಎಲ್ಲ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಅವರು ಜನತೆಯಲ್ಲಿ ವಿನಂತಿಸಿದ್ದಾರೆ.