ಸರಿವ ಕ್ಷಣಗಳನ್ನು ಬೊಗಸೆಯಲ್ಲಿ ಹಿಡಿದಿಡಲಿಕ್ಕಾಗುವುದಿಲ್ಲ…. ಆದರೆ ಸುಳಿವ ನೆನಪುಗಳನ್ನು ಬರೆದಿಡುವುದಕ್ಕಾಗುತ್ತದೆ ನನ್ನ ಬಳಿ. ಕರೆವ ಮನೆಗಳಿಗೆಲ್ಲಾ ಹೋಗಲಿಕ್ಕಾಗುವುದಿಲ್ಲ ಒಮ್ಮೊಮ್ಮೆ…ಆದರೆ ಹರಸುವ ಮನಸ್ಸುಗಳನ್ನು ಹೃದಯದಲ್ಲಿಟ್ಟು ಪೂಜಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲವೂ ನನ್ನ ಬಳಿಯೇ ಸಾಧಿಸಲಿಕ್ಕಾಗುವುದಿಲ್ಲ ಜೀವನದಲ್ಲಿ….ಆದರೆ ಸಾಧಕರನ್ನು ಕಂಡಾಗ ಸಂತೋಷಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲರಿಗೂ ಉಪಕರಿಸುವುದಕ್ಕಾಗುವುದಿಲ್ಲ ನನ್ನಲ್ಲಿ….ಆದರೆ ಯಾರೊಬ್ಬರು ಉಪಕರಿಸಿದರೂ ಸ್ಮರಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲರೂ ಬಯಸಿದಂತೆ ಬದುಕುವುದಕ್ಕೆ ಸಾಧ್ಯವಿಲ್ಲ…..ಆದರೆ ನಮ್ಮಷ್ಟಕ್ಕೆ ನಾವು ಬದುಕುವುದಕ್ಕೆ ಸಾಧ್ಯವಿದೆ ನಮ್ಮ ಬಳಿ. ಹಾರ ತುರಾಯಿ ಶಾಲು ಹೊದಿಸಿಯೇ ಸನ್ಮಾನ ಮಾಡಬೇಕೆಂದಿಲ್ಲ…ಆದರೆ ಪ್ರೀತಿಯಿಂದ ಅಭಿಮಾನದಿಂದ ನಾಲ್ಕು ಮಾತಾಡುವುದಕ್ಕೆ ಸಾಧ್ಯವಿದೆ ನಮ್ಮ ಬಳಿ. ನನ್ನ ಕಣ್ಣೆದುರಿಗೆ ಸಿಕ್ಕ ಪ್ರತಿಯೊಬ್ಬರ ಬದುಕಿಗೂ ಬಣ್ಣವಾಗುವುದಕ್ಕೆ ಸಾಧ್ಯವಿಲ್ಲ… ಆದರೆ ನನ್ನ ಬದುಕಿಗೆ ಬಣ್ಣವಾದವರನ್ನು ಮುಕ್ತ ಮನಸ್ಸಿನಿಂದ ಹೇಳಿಕೊಳ್ಳುವುದಕ್ಕೆ ಸಾಧ್ಯವಿದೆ ನನ್ನ ಬಳಿ.

*ಶ್ರೀ ವಿ.ಎಸ್.ಹೆಗಡೆ ಮೂರೂರು*

ಪ್ರತಿಯೊಬ್ಬನ ಭೇಟಿಯೂ ನಮ್ಮ ಜೀವನದಲ್ಲಿ ಒಂದು ಅರ್ಥಪೂರ್ಣವೇ. ಒಂದು ಆತ ಒಳ್ಳೆಯ ಪಾಠ ಕಲಿಸುತ್ತಾನೆ‌ ಅಥವಾ ಕೆಟ್ಟ ಪಾಠ ಕಲಿಸಿರುತ್ತಾನೆ. ಒಂದು ಜೀವನದಲ್ಲಿ ಹೇಗಿರಬೇಕು ಎಂದು ಕಲಿಸುತ್ತಾನೆ ಅಥವಾ ಹೇಗಿರಬಾರದು ಎಂಬುದನ್ನು ಹೇಳಿಕೊಟ್ಟಿರುತ್ತಾನೆ. ಕೆಲವರು ನೋವಿನ ಪಾಠ ಹೇಳಿಕೊಡುತ್ತಾರೆ. ಅದು ಜೀವನವನ್ನೆದುರಿಸುವ ಕಹಿ ಮದ್ದಿದ್ದಂತೆ. ಕೆಲವರು ನಲಿವಿನ ಪಾಠ ಭೋದಿಸಿರುತ್ತಾರೆ. ಅದು ನಮ್ಮ ಬದುಕಿನ ಸಂತೋಷವಾಗಿ ಕೊನೆಯವರೆಗೂ ಸಾಗುತ್ತದೆ. ಒಟ್ಟಿನಲ್ಲಿ ಪ್ರತಿಯೊಬ್ಬನಿಗೂ ಈ ನೋವು ನಲಿವಿನ ಪಾಠ ಕಟ್ಟಿಟ್ಟ ಬುತ್ತಿ. ನಾನು ಅಪಾರವಾಗಿ ಗೌರವಿಸುವ ಹಾಗೂ ನನ್ನ ಜೀವನದ ಪ್ರಭಾವೀ ಗುರುಗಳಲ್ಲಿ ಒಬ್ಬರಾದ ಶ್ರೀಯುತ ವಿ.ಎಸ್.ಹೆಗಡೆ ಮೂರೂರು ಅವರಿಗಿಂದು ಅಕ್ಷರಾರ್ಪಣೆ ಮಾಡಬೇಕು.
ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಎಸ್.ಕೆ.ಪಿ. ಅರೇಅಂಗಡಿ ಇಂದು ಹಲವರಿಗೆ ವಿದ್ಯಾದಾನ ಮಾಡಿ ಬದುಕುವುದಕ್ಕೆ ಒಂದು ನೆಲೆ ಕಲ್ಪಿಸಿದೆ. ಇಲ್ಲಿ ಕಲಿತ ಸಾವಿರ ಸಾವಿರ ಮಂದಿ ವಿದ್ಯಾರ್ಥಿಗಳು ಇಂದು ಜಗತ್ತಿನ ನಾನಾ ಮೂಲೆಗಳಲ್ಲಿ ನೆಲೆನಿಂತು ಮಾತೃ ಸಂಸ್ಥೆಯ ಬಗ್ಗೆ ಅಭಿಮಾನ ತೋರುತ್ತಾರೆ. ಶಾಲೆ ನಿಜವಾಗಿ ಹೇಳಬೇಕೆಂದರೆ ನಿರ್ಜೀವ ವಸ್ತು. ಆ ಶಾಲೆ ಎಂಬ ಪದಕ್ಕೆ ಜೀವ ತುಂಬುವವರೇ ಅಲ್ಲಿ ಕಲಿಸುವ ಗೌರವಾನ್ವಿತ ಶಿಕ್ಷಕ ಬಳಗ ಮತ್ತು ಕಲಿಯುವ ಮನಸ್ಸುಳ್ಳ ವಿದ್ಯಾರ್ಥಿಗಳು. ನಮ್ಮ ಕಾಲೇಜಿನಲ್ಲಿ ನನಗೆ ಇತಿಹಾಸ ಭೋದಿಸಿದ ವಿ.ಎಸ್. ಹೆಗಡೆ ಸರ್, ಹಲವರು ಇಂದಿಗೂ ನೆನೆಯುವ ಗೌರವಾನ್ವಿತ ಗುರುಶ್ರೇಷ್ಠರು.
ನಮಗೆ ಹೈಸ್ಕೂಲ್ ಮತ್ತು ಕಾಲೇಜು ಒಟ್ಟಿಗೆ ಇರುವುದರಿಂದ ನಮ್ಮ ಇಡೀ ಗುರು ಬಳಗ ಐದು ವರ್ಷಗಳ ಕಾಲ ನಮ್ಮ ಮೇಲೆ ಪ್ರಭಾವ ಬೀರುವುದಕ್ಕೆ ಸಾಧ್ಯವಾಯಿತು. ನಾವು ಕೇವಲ ವರ್ಗದಲ್ಲಿ ನಡೆಯುವ ಪಾಠ ಭೋದನೆಯಿಂದಲೇ ಪ್ರಭಾವ ಹೊಂದಿದ್ದಲ್ಲ. ಅವರ ನಡೆ, ನುಡಿ, ವ್ಯಕ್ತಿತ್ವ, ಸಂಘಟನೆ, ವ್ಯವಹಾರಗಳಿಂದಲೂ ಹೆಚ್ಚು ಪ್ರಭಾವಯುತವಾಗಿದ್ದೆವು.
ವಿ.ಎಸ್ ಹೆಗಡೆ ಸರ್ ನಮ್ಮ ತಂದೆಯವರಿಗೇ ಕಲಿಸಿದ ಗುರುಗಳಾಗಿದ್ದರಿಂದ ಹೈಸ್ಕೂಲಿಗೆ ಕಾಲಿಟ್ಟ ದಿನದಿಂದಲೇ ಪರಿಚಿತ ಭಾವ ಕಾಡಿದ್ದು. ಕುಳ್ಳಗಿನ ಗುಂಡಗಿದ್ದ ಗಂಭೀರ ಭಾವದ ವಿ.ಎಸ್.ಹೆಗಡೆ ಸರ್ ಅನವಶ್ಯಕ ನಗುವವರಲ್ಲ. ಗಜ ಗಾಂಭೀರ್ಯದ ನಡಿಗೆ ಅವರದ್ದು. ಶಿಸ್ತುಬದ್ಧ ವ್ಯಕ್ತಿತ್ವ ಹಾಗೂ ವೃತ್ತಿ ನಿಷ್ಠ ನಡವಳಿಕೆ ಅವರನ್ನು ನನಗೆಂದೂ ನೆನಪಿಸುವಂತೆ ಮಾಡುತ್ತದೆ. ಈ ಕಾರಣಕ್ಕಾಗಿಯೇ ಅವರು ಅನೇಕ ಸಂಘ ಸಂಸ್ಥೆಗಳ ಮುಂದಾಳತ್ವವನ್ನು ವಹಿಸಿ ಜನಜನಿತರಾಗಿದ್ದಾರೆ. ಶ್ರೀಮಠದ ಜವಾಬ್ದಾರಿಯನ್ನು ಶಿರಸಾ ವಹಿಸಿ ಗುರುಕೃಪೆಗೆ ಪಾತ್ರರಾದ ಸರ್ ಪ್ರಗತಿ ವಿದ್ಯಾಲಯ ಮೂರೂರು ಇದರ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೂಡ ಕಾರ್ಯ ನಿರ್ವಿಹಿಸಿದವರು. ತಮ್ಮ ಸೇವಾ ನಿವೃತ್ತಿ ಹೊಂದಿದ ನಂತರವೂ ಅವರ ವೃತ್ತಿ ಧಕ್ಷತೆ ಗಮನಿಸಿದ್ದ ಶ್ರೀಯುತ ಮುರಳೀಧರ ಪ್ರಭುಗಳು ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಡಿ-ಇಡಿ ಕಾಲೇಜಿನ ಪ್ರಾಂಶುಪಾಲರಾಗಿ ಅವರನ್ನು ನೇಮಿಸಿದ್ದು ಹಲವಾರು ವಿದ್ಯಾರ್ಥಿಗಳ ಪಾಲಿಗೆ ವರದಾನವಾದದ್ದು ಸುಳ್ಳಲ್ಲ.
‌ನನ್ನನ್ನು ಸದಾ ಕಾಳಜಿಯ ಕಣ್ಣುಗಳಿಂದಲೇ ನೋಡುತ್ತಿದ್ದ ನಮ್ಮ ಸರ್…. ನನ್ನನ್ನು ಅವರ ಕಾಲೇಜಿಗೂ ಒಮ್ಮೆ ಕರೆಸಿಕೊಂಡು ಉಪನ್ಯಾಸ ಮಾಡುವ ಅವಕಾಶ ಒದಗಿಸಿದರು. ನಮ್ಮ ಶಿಷ್ಯ ಎಂದು ಹೆಮ್ಮೆಯಾಗುತ್ತದೆ ಎಂದು ಬೆನ್ನು ತಟ್ಟಿ ಆಶೀರ್ವದಿಸಿದರು.
ಗುರು ಶಿಷ್ಯ ಪರಂಪರೆಯೇ ಹಾಗೆ. ಅದು ಎಂದಿಗೂ ಮುಗಿಯದ ಸಿಹಿ ಸವಿ ನೆನಪು. ಕಾಣದಿದ್ದರೂ ಕಾಣುವ ತುಡಿತವಾಗುತ್ತದೆ. ಕಂಡರೋ ಕಾಲಿಗೆ ಬಿದ್ದು ಒಮ್ಮೆ ಕಣ್ಣೀರಿಡೋಣ ಎನಿಸಿಬಿಡುತ್ತದೆ. ನಾವಿಂದು ನೆಮ್ಮದಿಯ ಕೈತುತ್ತು ತಿನ್ನುವುದಕ್ಕೆ ಅವರೇ ಕಾರಣರಲ್ಲದೇ ಮತ್ತಾರು. ಸರ್ಕಾರ ಅವರಿಗೆ ಸಂಬಳ ಕೊಟ್ಟಿರಬಹುದು. ಆದರೆ ನಮ್ಮ ವಿ.ಎಸ್.ಹೆಗಡೆ ಸರ್ ಕೇವಲ ಸಂಬಳಕ್ಕಾಗಿಯೇ ಕಲಿಸುತ್ತಿದ್ದರೆಂದು ನನಗನಿಸುತ್ತಿರಲಿಲ್ಲ. ವಿದ್ಯಾರ್ಥಿಗಳಿಗೆ ನೋಟ್ಸ ಕೊಡುವುದಕ್ಕೆಂದು ತಾವೇ ಸ್ವತಃ ನೋಟ್ಸ ಬರೆಯುತ್ತಿದ್ದರು ಅವರು.
ಇತಿಹಾಸವನ್ನು ನಿದ್ರೆ ಬಾರದಂತೆ ಬೋಧಿಸುವುದೂ ಒಂದು ಕಲೆ.? ನನ್ನ ಸಮೀಕ್ಷೆಯ ಪ್ರಕಾರ ವಿದ್ಯಾರ್ಥಿಗಳು ಕಠಿಣ ಎನ್ನುವ ವಿಷಯ ಗಣಿತ, ಬೋರು ಎನ್ನುವ ವಿಷಯ ಸಮಾಜ. ಸಮಾಜವೇ ಬೋರಾದರೆ ಸಮಾಜದಲ್ಲಿ ಬೋರಾಗದಂತೆ ಬದುಕುವುದಾದರೂ ಹೇಗೆ?! ಹೀಗಾಗಿ ಸಮಾಜ ವಿಜ್ಞಾನವನ್ನೂ ನನ್ನ ಇಷ್ಟದ ವಿಷಯವಾಗಿಸುವಲ್ಲಿ ವಿ.ಎಸ್.ಹೆಗಡೆ ಸರ್ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.
ಸುಖೀ ಸಂಸಾರದಲ್ಲಿ ಪತ್ನಿ ಪುತ್ರರೊಂದಿಗೆ ವಿಶ್ರಾಂತ ಜೀವನ ಕಳೆಯುತ್ತಿರುವ ವಿ.ಎಸ್.ಹೆಗಡೆ ಸರ್ ಈಗಲೂ ಕ್ರಿಯಾಶೀಲರಾಗಿಯೇ ಇದ್ದಾರೆ. ಕೃಷಿಯ ಜೊತೆ ಜೊತೆಗೆ ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಅವರು ನೂರ್ಕಾಲ ನಮ್ಮನ್ನು ಹರಸುತ್ತಾ ಇರಬೇಕು.
‌‌‌‌‌‌ ಮೂರೂರು ಎಂಬ ಊರೇ ಹಾಗೆ. ಅಲ್ಲಿ ಬದುಕು ಕಟ್ಟಿಕೊಂಡ ಅನೇಕರು ಆಸ್ತಿಕರು. ಕ್ರಿಯಾಶೀಲ ಕೃಷಿಕರು, ಸಮಾಜಮುಖಿಗಳು, ಪ್ರತಿಭಾಶಾಲಿಗಳು, ಸಾತ್ವಿಕರು, ತಾವೂ ಬದುಕಿ ಬದುಕಾಗುವವರು. ಪ್ರತಿಯೊಂದು ಊರಿಂದ ಬರುವವರೂ ಅಲ್ಲಿನ ವಿಶೇಷ ಗುಣಗಳನ್ನು ತಮ್ಮೊಂದಿಗೆ ತಂದಿರುತ್ತಾರೆ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಅವರಿಗೆ ದೀರ್ಘಾಯುಷ್ಯ ಆರೋಗ್ಯ ಕೊಟ್ಟು ಕಾಪಾಡಲೆಂಬುದೇ ನನ್ನ ನಿತ್ಯ ಪ್ರಾರ್ಥನೆ.

RELATED ARTICLES  ಸಂಪನ್ನವಾಯ್ತು ದಿ|| ಮೋಹನ್ ಶೆಟ್ಟಿ ಮೆಮೋರಿಯಲ್ ಟ್ರಸ್ಟ್"ವತಿಯಿಂದ 'ಸ್ಪೋಕನ್ ಇಂಗ್ಲಿಷ್' ಕಾರ್ಯಾಗಾರ

*ವಿ.ಎಸ್ ಹೆಗಡೆ ಸರ್ ಅವರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು*

*ವಿ.ಎಸ್.ಹೆಗಡೆ ಸರ್ ಅವರನ್ನು ಪ್ರೀತಿಯಿಂದ ಅಭಿನಂದಿಸೋಣ.*

?94495 48490

???????❤️????????❤️?????

RELATED ARTICLES  ಎಲ್ಲರ ಮೆಚ್ಚಿನ ಟ್ಯಾಕ್ಸಿ ಚಾಲಕ ಕೀರ್ತಿ ಕಿರಣ ಇನ್ನಿಲ್ಲ.

‌‌‌‌‌