ಕುಮಟಾ : ಕೋವಿಡ್ ಸೋಂಕಿತರ ಪ್ರಮಾಣ ಗಣನೀಯವಾಗಿ ಹೆಚ್ವುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಜಾರಿಗೊಳಿಸಿರುವ ಲಾಕ್ ಡೌನ್ ಗೆ ( ಕೊರೋನಾ ಕರ್ಫ್ಯೂ) ಕುಮಟಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳಿಗ್ಗೆ 6 ರಿಂದ 10 ಗಂಟೆ ಹೊರತುಪಡಿಸಿದರೆ ಉಳಿದ ಸಮಯದಲ್ಲಿ ಜನರ ಓಡಾಟ ಕಡಿಮೆ ಇರುವುದು ಕಂಡುಬಂದಿದೆ. ಕುಮಟಾ ಪಟ್ಟಣದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳು ವಾಹನ ಸಂಚಾರ ವಿಲ್ಲದೇ ಖಾಲಿಖಾಲಿಯಾಗಿದ್ದು, ವಾಣಿಜ್ಯ ಮಳಿಗೆಗಳು ಸಹ ಸಂಪೂರ್ಣ ಬಂದ್ ಮಾಡಿ ಲಾಕ್ ಡೌನ್ ಗೆ ಸಹಕಾರ ನೀಡಲಾಗಿದೆ.
ಹೂವು, ಹಣ್ಣು, ತರಕಾರಿ ಮಾರುಕಟ್ಟೆ, ಕಿರಾಣಿ ಅಂಗಡಿ, ಮಾಂಸದ ಅಂಗಡಿ ಸೇರಿ ಇತರೆ ಅಗತ್ಯ ವಸ್ತುಗಳ ಮಳಿಗೆಗಳು ಬೆಳಿಗ್ಗೆ ನಿಗದಿತ ಸಮಯದಲ್ಲಿ ಮಾತ್ರವೇ ತೆರೆದಿತ್ತು. ಮಾಸ್ಕ ಧರಿಸಿದವರಿಗೆ ಪೊಲೀಸರು ದಂಡ ವಿಧಿಸಿದರು, ಅನಗತ್ಯ ಓಡಾಟ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು.
ಪ್ರಯಾಣಿಕ ಆಟೋಗಳು ಆಲ್ಲೊಂದು, ಇಲ್ಲೊಂದು ಸಂಚರಿಸುತ್ತಿರುವುದು ಬಿಟ್ಟರೆ ಎಲ್ಲ ರೀತಿಯ ಪ್ರಯಾಣಿಕ ವಾಹನಗಳು ಸ್ಥಗಿತಗೊಂಡಿವೆ. ಸಾರಿಗೆ ಬಸ್ ಗಳು ಬಸ್ ನಿಲ್ದಾಣದಲ್ಲಿ ನಿಲುಗಡೆಯಾಗಿ ಸಂಚಾರ ಸ್ಥಗಿತಗೊಳಿಸಿವೆ.
ಇನ್ನು ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಲುವಾಗಿ ಅಗತ್ಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ತುರ್ತು ಅಗತ್ಯತೆಯ ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್ ಗಳನ್ನು ತೆರೆದಿದ್ದವು. ಕೆಲ ಉದ್ಯೋಗಿಗಳು ಉದ್ಯೋಗದ ಅನಿವಾರ್ಯತೆಗೆ ಓಡಾಟ ನಡೆಸಿದ್ದು ಬಿಟ್ಟರೆ ಬೇರೆ ಓಡಾಟಗಳು ಬಂದ್ ಆಗಿದ್ದವು.
ಚಿತ್ರ ಹಾಗೂ ವಿವರ : ಜಯದೇವ ಬಳಗಂಡಿ, ಕುಮಟಾ