ಕಾರವಾರ: ಕೊರೊನಾ 2 ನೇ ಅಲೆ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು, ಈ ನಡುವೆ ತಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಯಲ್ಲಿದ್ದರೂ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರೊಬ್ಬರು ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಜಿಲ್ಲಾ ಕೇಂದ್ರ ಕಾರವಾರದ ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಶ್ವಾಸಕೋಶ ತಜ್ಞ ಡಾ.ಶ್ರೀನಿವಾಸ್ ತಮ್ಮ ತಂದೆಯ ಹೃದಯ ಚಿಕಿತ್ಸೆಯಾಗಿದ್ದರೂ ಕೊರೋನಾ ಸೋಂಕಿತರ ರಕ್ಷಣೆ ಮಾಡುವ ಕಾಯಕ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮೂಲತಃ ಶಿವಮೊಗ್ಗದವರಾದ ಇವರ ತಂದೆಗೆ ಇತ್ತೀಚೆಗೆ ಹೃದಯಾಘಾತವಾಗಿತ್ತು. ಈ ವೇಳೆ ಊರಿಗೆ ತೆರಳಿದ್ದ ಡಾ.ಶ್ರೀನಿವಾಸ್, ತಂದೆಗೆ ಚಿಕಿತ್ಸೆ ಕೊಡಿಸಿ 24 ಗಂಟೆಯೊಳಗೆ ಕೆಲಸಕ್ಕೆ ಹಾಜರಾಗಿದ್ದಾರೆ.
ವೈದ್ಯರ ಕೊರತೆಯಿರುವುದರಿಂದ ಕೋವಿಡ್ ರೋಗಿಗಳಿಗೆ ಸಮಸ್ಯೆಯಾಗಬಾರದೆಂದು ಈ ರೀತಿ ಮಾಡಿದ್ದಾರೆ. ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಇಬ್ಬರು ಶ್ವಾಸಕೋಶ ತಜ್ಞರಿದ್ದು, ತಂದೆಯ ಆರೈಕೆ ಎಂದು ಊರಲ್ಲೇ ಉಳಿದರೆ, ಕಾರವಾರದಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವಿಳಂಬವಾಗುತ್ತದೆ. ತಂದೆ ಅನಾರೋಗ್ಯದ ನಡುವೆ ಜನರ ರಕ್ಷಣೆಯೂ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.
ಇಂತಹ ಅನೇಕಾನೇಕ ವೈದ್ಯರು ಈ ಕಾಲದಲ್ಲಿ ಸೇವೆ ಸಲ್ಲಿಸುತ್ತಿದ್ದು ಅಂತಹವರ ಸೇವೆಯನ್ನು ಸಾರ್ವಜನಿಕ ವಲಯದವರು ಸ್ಮರಿಸಲೇ ಬೇಕಾಗಿದೆ.