ಕುಮಟಾ : ದೇಶದ ವಿವಿಧ ರಾಜ್ಯಗಳ ಮೂವತ್ತೇರಡು ಲೇಖಕರು ಸೇರಿ ಸಿದ್ದಗೊಳಿಸಿದ ಕವನ ಸಂಕಲನ ಇಂಡಿಯಾ ಬುಕ್ ಆಫ್ ರೆಕಾರ್ಡಗೆ ಸೇರ್ಪಡೆ ಆಗಿದ್ದು, ಈ ಲೇಖಕರ ಪಟ್ಟಿಯಲ್ಲಿ ಉತ್ತರ ಕನ್ನಡ ಮೂಲದ ಕವಿ, ಬರಹಗಾರ ಪ್ರಮೋದ ಮೋಹನ ಹೆಗಡೆ ಕೂಡ ಸೇರ್ಪಡೆ ಆಗಿದ್ದಾರೆ.
ಪ್ರಮೋದ ಹೆಗಡೆ ಮೂಲತಃ ಕುಮಟಾ ತಾಲೂಕಿನ ಹೆರವಟ್ಟದವರು. ಸೆಲ್ಕೋ ಇಂಡಿಯಾದ ಸಿಇಓ ಮೋಹನ ಹೆಗಡೆ ಹಾಗೂ ಕರಕುಶಲ ಕಲಾವಿದೆ ಉಷಾ ಹೆಗಡೆ ದಂಪತಿ ಪುತ್ರ. ಇಂಜನೀಯರಿಂಗ್ ಪದವಿ ಪಡೆದು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಫೋಟೊಗ್ರಫಿ ಜತೆಗೆ ಅವ್ಯಕ್ತ ಡಾಟ್ ಮಿ ಎಂಬ ಬ್ಲಾಗ್ ಕೂಡ ನಿರ್ವಹಿಸುತ್ತಾರೆ ಎಂಬುದು ಉಲ್ಲೇಖನೀಯ.
ವಿವಿಧತೆಯಲ್ಲಿ ಏಕತೆ ವಿಷಯದ ಕುರಿತು ಪ್ರಕಟಿಸಲಾದ ಕವನ ಸಂಕಲನ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡಗೆ ಸೇರಿದೆ. ಇದರಲ್ಲಿ ಪ್ರಮೋದ ಹೆಗಡೆ ಅವರ ಕನ್ನಡ ಹಾಗೂ ಆಂಗ್ಲ ಭಾಷೆಯ ಕವನಗಳು ಇವೆ. ದೇಶದ ಪ್ರಮುಖ ಹದಿನಾರು ಭಾಷೆಯಲ್ಲಿ ಕವನಗಳ ಗುಚ್ಚ ಇಲ್ಲಿದೆ. ಕಳೆದ 2020ರ ಮಾರ್ಚ್‍ನ ಲಾಕ್ ಡೌನ್ ಕಾಲದಲ್ಲಿ ಸೇರಿ ಸಂಗ್ರಹಿಸಲಾದ ಕೃತಿ ಈ ವರ್ಷದ ಜನವರಿಯಲ್ಲಿ ಪ್ರಕಟವಾಗಿದೆ. ಅದೀಗ ಇಂಡಿಯಾ ಬುಕ್ ಆಫ್ ರೆಕಾರ್ಡನಲ್ಲೂ ಸೇರ್ಪಡೆ ಆಗಿದೆ.