ಕುಮಟಾ : ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಮೇ 15 ಮತ್ತು 16 ರಂದು ಎರಡು ದಿನಗಳ ಕಾಲ ಭಾರೀ ಪ್ರಮಾಣದ ಗಾಳಿ – ಮಳೆಯಾಗುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ನೀಡಿತ್ತು ಅದಲ್ಲದೆ ಈ ಕುರಿತು ಜನತೆ ಜಾಗ್ರತರಾಗಿರುವಂತೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿತ್ತು.
ಕಳೆದ ಎರಡು ದಿನದಿಂದ ಪ್ರಾರಂಭವಾದ ಮಳೆ ಹಾಗೂ ಪ್ರಾರಂಭವಾದ ಗಾಳಿ ಜನತೆಯಲ್ಲಿ ಭೀತಿ ಹುಟ್ಟಿಸಿದೆ. ಕುಮಟಾ ತಾಲೂಕಿನ ಧಾರೇಶ್ವರ ಹಾಗೂ ಕುಮಟಾದ ವನ್ನಳ್ಳಿ ಬೀಚ್ ನಲ್ಲಿ ಬೃಹದಾಕಾರದ ಅಲೆಗಳು ಏಳುತ್ತಿವೆ, ಸಮುದ್ರದ ಅಬ್ಬರ ಹೆಚ್ಚಿದ್ದು ದಂಡೆಗೆ ಅಪ್ಪಳಿಸುವ ದೊಡ್ಡ ಗಾತ್ರದ ಅಲೆಗಳು ಎದೆ ಝಲ್ ಎನಿಸುವಂತೆ ಮಾಡುತ್ತಿದೆ.
ಕುಮಟಾ ಫಿಶ್ ಮಾರ್ಕೆಟ್, ಚಿತ್ರರಂಜನ್ ಟಾಕೀಸ್, ವನ್ನಳ್ಳಿ, ಹೊಲನಗದ್ದೆ ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿವೆ. ವನ್ನಳ್ಳಿ ಬೀಚ್ ರಸ್ತೆಯ ಮೇಲೆ ರಕ್ಕಸ ಗಾತ್ರದ ಅಲೆಗಳು ಬಡಿಯುತ್ತಿದ್ದು, ಸಮೀಪದ ನಿವಾಸಿಗಳು ಮನೆಯಿಂದ ಹೊರಬಂದು ಪಟ್ಟಣ ಪ್ರದೇಶದ ಸಂಬಂಧಿಗಳ ಮನೆ ಸೇರಲು ಕೆಲವರು ಮುಂದಾಗಿದ್ದಾರೆ.
ಕುಮಟಾಕ್ಕೆ ಆಗಮಿಸಿದ ಬೆಳಗಾಂ SDRF ತಂಡ ಆಗಮಿಸಿದ್ದು, ವಿಪತ್ತು ನಿರ್ವಹಣೆಗೆ ಸಿದ್ಧವಾಗಿದೆ. ಪ್ರವಾಹ ಸಂದರ್ಭ ದಲ್ಲಿ ಜನರ ರಕ್ಷಣೆ ಮಾಡಲಿದೆ.
ಭಾರೀ ಗಾಳಿಗೆ ವಿದ್ಯುತ್ ಕಂಬಗಳು ಧರೆಗುರುಳಿದ್ದು,ಬಹುತೇಕ ಕಡೆ ವಿದ್ಯುತ್ ಇಲ್ಲವಾಗಿದೆ..ಕಲಭಾಗ್ ಹಾಗೂ ಶಶಿ ಹಿತ್ತಲ್ ಗಳಲ್ಲಿ ವಸತಿ ಕೇಂದ್ರ ಆರಂಭ ಆರಂಭಿಸಲಾಗಿದೆ.
ರಾಜ್ಯದ ಕರಾವಳಿಯುದ್ದಕ್ಕೂ ತೌಕ್ತೆ ಚಂಡಮಾರುತದ ಪ್ರಭಾವ ಜೋರಾಗಿದೆ. ಉತ್ತರ ಕನ್ನಡದ ಕರಾವಳಿ ತಾಲೂಕುಗಳಲ್ಲಿ ಭಾರೀ ಗಾಳಿ ಸಹಿತ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇದರ ನಡುವೆ ಸಮುದ್ರದಂಚಿನಲ್ಲಿ ಕಡಲ್ಕೊರೆತಗಳು ಉಂಟಾಗಿದ್ದು, ಮನೆಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿದೆ.
ಕೆಲವೆಡೆ ಗದ್ದೆಗಳಲ್ಲೆಲ್ಲ ನೀರು ನಿಂತು ನಷ್ಟವುಂಟಾಗಿದೆ. ಇನ್ನು ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಗಾಳಿ ರಭಸದಿಂದ ಬೀಸುತ್ತಿರುವ ಕಾರಣ ಅಲೆಗಳು ಕೂಡ ರೌದ್ರಾವತಾರ ತಾಳಿದೆ. ಕಡಲಂಚಿನ ಅನೇಕ ಗ್ರಾಮಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕಡಲಂಚಿನ ಗ್ರಾಮಗಳ ಮನೆಗಳ ನಿವಾಸಿಗಳು ಸಾಮಾನು, ಸರಂಜಾಮು ಉಳಿಸಿಕೊಳ್ಳಲು, ಮನೆಯಿಂದ ನೀರು ಹೊರ ಹಾಕಲು ಶ್ರಮಪಡುತ್ತಿದ್ದ ದೃಶ್ಯಗಳು ಕಂಡುಬಂದಿವೆ.
ಹೊನ್ನಾವರ ಕರ್ಕಿ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ನೀರು. ಕರ್ಕಿಯ ತೊಪ್ಪಲಕೇರಿ, ಪಾವಿನಕುರ್ವಾ, ಹೆಗಡೆಹಿತ್ಲು ಇತರೆ ಭಾಗದಲ್ಲಿ ಸಮುದ್ರ ಅಲೆಗಳ ರೌದ್ರಾವತಾರ ತಾಳಿದ್ದು, ಪಾವಿನಕುರ್ವಾ ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರ ಸ್ಥಾಪನೆ ಮಾಡಲಾಗಿದೆ.
ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಜಾಲಿ ಸಮುದ್ರ ತೀರವನ್ನು ಡೇಂಜರ್ ಝೋನ್ ಎಂದು ಘೋಷಿಸಲಾಗಿದ್ದು, ಅಲ್ಲಿನ ಕಡಲತೀರದ ನಿವಾಸಿಗಳಿಗೆ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಕೆಲವೆಡೆ ಸಮುದ್ರ ತೀರದಲ್ಲಿ ಲಂಗರು ಹಾಕಿದ್ದ ದೋಣಿಯನ್ನು ಸಮುದ್ರದ ಅಲೆಗಳಿಂದ ರಕ್ಷಣೆ ಮಾಡಲು ಹೋಗಿದ್ದ ಜಾಲಿಕೋಡಿ ನಿವಾಸಿ ಲಕ್ಷ್ಮಣ ನಾಯ್ಕ ಅಲೆ ಅಪ್ಪಳಿಸಿ ಇನ್ನೊಂದು ದೋಣಿ ಬಡಿದು, ಎರಡು ದೋಣಿಗಳ ನಡುವೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಗೋಕರ್ಣದ ದುಬ್ಬನಶಶಿ, ಮೇನ್ ಬೀಚ್ ಪ್ರದೇಶಗಳಲ್ಲೂ ಅಲೆಗಳ ಅಬ್ಬರ ಜೋರಾಗಿದೆ. ಅಂಕೋಲಾದ ಹಾರವಾಡದಲ್ಲಿ ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಸಮೀಪದ ಗಾಳಿ ಮರಗಳು, ಕಲ್ಲುಗಳು ಸಮುದ್ರದ ಪಾಲಾಗುತ್ತಿವೆ. ಕಾರವಾರದ ಟ್ಯಾಗೋರ್ ಕಡಲತೀರದಲ್ಲಂತೂ ಅಲೆಗಳು ಮಕ್ಕಳ ಪಾರ್ಕ್ ವರೆಗೆ ಬಡಿದಿದ್ದು, ಇದರಿಂದಾಗಿ ಇನ್ನಷ್ಟು ಆತಂಕ ಎದುರಾಗಿದೆ. ದೇವಬಾಗದಲ್ಲೂ ಸಮುದ್ರ ಮಟ್ಟ ಹೆಚ್ಚಾಗಿ ದಡಕ್ಕೆ ಅಪ್ಪಳಿಸುತ್ತಿವೆ.