ಭಟ್ಕಳ : ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಸ್ಥಳಗಳ ವೀಕ್ಷಣೆಗೆ ಕಂದಾಯ ಸಚಿವರಾದ ಶ್ರೀ ಆರ್ ಅಶೋಕ ಇಂದು ಉತ್ತರಕನ್ನಡಕ್ಕೆ ಭೇಠಿನೀಡಿದರು.
ಆರ್. ಅಶೋಕ ಮತ್ತು ಜಿಲ್ಲಾ ಉಸ್ತುವಾರಿ ಮತ್ತು ಕಾರ್ಮಿಕ ಸಚಿವರಾದ ಶ್ರೀ ಶಿವರಾಮ್ ಹೆಬ್ಬಾರ್ ತೆಂಗಿನಗುಂಡಿ, ಹೇರೆಕೆರಿ, ಹೆರ್ತಾರ, ಬಂದರ್, ತಲಗೋಡು ಪ್ರದೇಶಗಳಿಗೆ ಭೇಟಿ ನೀಡಿ ಚಂಡಮಾರುತದಿಂದಾದ ಹಾನಿಯನ್ನು ವೀಲ್ಷಿಸಿದರು.
ನಂತರ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ ಚಂಡಮಾರುತದಿಂದಾಗಿ ಹಾನಿಗೊಳಗಾದ ಮನೆಗಳ ತುರ್ತು ನಿರ್ವಹಣೆಗಾಗಿ 10000 ರೂಪಾಯಿ ಎರಡು ದಿನಗಳ ಒಳಗಾಗಿ ಬಿಡುಗಡೆ ಮಾಡಬೇಕು ಮತ್ತು ಶೀಘ್ರ ಪುನರ್ನಿರ್ಮಾಣ ಮಾಡಲು ಸಾಧ್ಯವಿರುವ, ಹಾನಿಗೊಳಗಾದ ಎಲ್ಲಾ ರಸ್ತೆಗಳಿಗೆ ವಿಪತ್ತು ನಿರ್ವಹಣಾ ನಿಧಿಯಡಿಯಲ್ಲಿ ಅನುದಾನವನ್ನು ಒದಗಿಸುವಂತೆ, ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೂ ತೌಕ್ತೆ ಚಂಡಮಾರುತದಿಂದ ಅಪಾರ ಹಾನಿಯಾಗಿರುವ ವಿವರವನ್ನು ಸಚಿವರಿಗೆ ನೀಡಲಾಯಿತು. ಅಲ್ಲದೇ, ಕಾರವಾರ ಮತ್ತು ಅಂಕೋಲಾ ತಾಲ್ಲೂಕಿನಲ್ಲಿ ಕಡಲ ಕೊರೆತ ಪ್ರತಿಬಂಧಕ ನಿರ್ಮಾಣ ಕಾಮಗಾರಿ ಅವಶ್ಯಕವಾಗಿದೆ. ಸಮುದ್ರದ ನೀರು ಮನೆಗಳಿಗೆ ನುಗ್ಗಿ ಹಾನಿಯಾಗಿರುವ ಬಗ್ಗೆ ಮಾಹಿತಿ ನೀಡಲಾಯಿತು.
ಸಮುದ್ರದ ಅಲೆಯ ಹೊಡೆತಕ್ಕೆ ದೋಣಿಗೆ ಹಾನಿಯಾದ ವಿವರ, ಬಲೆ ಹಾನಿ, ತೊಟಗಾರಿಕಾ ಬೆಳೆ ಹಾನಿ ವಿವರ ಮತ್ತು ಮನೆಗಳಿಗೆ ಹಾನಿಯಾದ ವಿವರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಉತ್ತರಕನ್ನಡ ಜಿಲ್ಲಾಧ್ಯಕ್ಷರಾದ ಶ್ರೀ ವೆಂಕಟೇಶ ನಾಯ್ಕ, ಭಟ್ಕಳ-ಹೊನ್ನಾವರ ಶಾಸಕರಾದ ಶ್ರೀ ಸುನಿಲ್ ನಾಯ್ಕ, ಕುಮಟಾ-ಹೊನ್ನಾವರ ಶಾಸಕರಾದ ಶ್ರೀ ದಿನಕರ ಶೆಟ್ಟಿ, ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಹೆಚ್ಚುವರಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಬಂದರು ಇಲಾಖೆ ಅಧಿಕಾರಿಗಳು, ತಹಶೀಲ್ದಾರ, ಮುಖಂಡರು ಉಪಸ್ಥಿತರಿದ್ದರು.