ಗೋಕರ್ಣ: ಕೋವಿಡ್-19 ತೀವ್ರತೆ ಹಿನ್ನೆಲೆಯಲ್ಲಿ ಶೈಕ್ಷಣಿಕವಾಗಿ ಅನಿಶ್ಚಿತ ಸ್ಥಿತಿಯನ್ನು ಎದುರಿಸುತ್ತಿರುವ 10ನೇ ತರಗತಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗಾಗಿ ಶ್ರೀರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಈ ತಿಂಗಳ 21ರಂದು ಅಂತರ್ಜಾಲ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಅನಿಶ್ಚಿತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಸ್ವತಃ ಮಕ್ಕಳಿಗೆ ಮಾತ್ರವಲ್ಲದೇ ಪಾಲಕರಿಗೂ ಆತಂಕವಿದೆ. ಇಂಥ ಸಂದರ್ಭದಲ್ಲಿ ಧನಾತ್ಮಕವಾಗಿ ಯೋಚಿಸುವ ಮೂಲಕ ಹೇಗೆ ಒತ್ತಡ ಕಡಿಮೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಪೋಷಕರಿಗೆ ಮಾಹಿತಿ ನೀಡುವುದು ಇದರ ಉದ್ದೇಶ ಎಂದು ವಿವಿವಿ ವಿದ್ಯಾ ಪರಿಷತ್ ಅಧ್ಯಕ್ಷ ಎಂ.ವಿ.ಹೆಗಡೆ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಆತಂಕದ ಪರಿಸ್ಥಿತಿಯಲ್ಲಿ ಧನಾತ್ಮಕವಾಗಿ ಯೋಚಿಸಲು ಸರಳ ಸೂತ್ರಗಳು ಎಂಬ ವಿಷಯದ ಬಗ್ಗೆ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಸನಿವಾಸ ವೈದ್ಯೆ ಹಾಗೂ ಖ್ಯಾತ ಮಾನಸಿಕ ತಜ್ಞೆ ಡಾ.ಸ್ನೇಹಾ ಉಪನ್ಯಾಸ ನೀಡುವರು ಎಂದು ಉಪಾಧ್ಯಕ್ಷ ಮರುವಳ ನಾರಾಯಣ ಭಟ್ ವಿವರಿಸಿದ್ದಾರೆ.
ವಿವಿವಿ ಧ್ಯೇಯವೆನಿಸಿದ ಋಷಿಯುಗ- ನವಯುಗ ಸಮ್ಮಿಳಿತ ಚಿಂತನೆಗೆ ದಾರಿ ಮಾಡುವ ಈ ವಿಚಾರ ಸಂಕಿರಣದಲ್ಲಿ ಮನಃಶಾಸ್ತ್ರೀಯ ಆಯಾಮಗಳ ಬಗ್ಗೆ ಸ್ನೇಹಾ ವಿಚಾರ ಮಂಡಿಸಿದರೆ, ದಾರ್ಶನಿಕವಾಗಿ ಇಂಥ ಒತ್ತಡ ಸ್ಥಿತಿಯನ್ನು ನಿಭಾಯಿಸುವ ಸೂತ್ರಗಳ ಬಗ್ಗೆ ಪರಮಪೂಜ್ಯರು ಬೆಳಕು ಚೆಲ್ಲುವರು. ಸಂಪೂರ್ಣ ಉಚಿತ ವಿಚಾರ ಸಂಕಿರಣದಲ್ಲಿ ಸಾರ್ವಜನಿಕರು ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶವಿದ್ದು, ಆಸಕ್ತರು ಗೂಗಲ್ ವೇದಿಕೆ <https://meet.google.com/tct-cuhk-ons> ಗೆ ಭೇಟಿ ನೀಡಬಹುದು.

RELATED ARTICLES  ಸುಜೂಕಿ ಡಿಸೈರ್ ಬಿಡುಗಡೆ