ಹೊನ್ನಾವರ : ಅಂಬುಲೆನ್ಸ್ ಮತ್ತು ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಅಂಬುಲೆನ್ಸ್ ನಲ್ಲಿದ್ದ ರೋಗಿ ಮೃತಪಟ್ಟಿದ್ದು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಹೊನ್ನಾವರದ ಸಮೀಪ ರಾಮತೀರ್ಥ ಕ್ರಾಸ್ ನಲ್ಲಿ ಈ ಅಪಘಾತ ಸಂಭವಿಸಿದ್ದು ಅಪಘಾತದ ಪರಿಣಾಮ ಅಂಬುಲೆನ್ಸ್ ಸಂಪೂರ್ಣ ನುಜ್ಜು ಗೊಜ್ಜಾಗಿದೆ.
ಘಟನೆಯಲ್ಲಿ ಕುಮಟಾದ ಅಂಬುಲೆನ್ಸ್ ಚಾಲಕ ಜಾನು ನಾಯ್ಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಎಸ್.ಎಸ್ ಅಂಬುಲೆನ್ಸ್ ಚಾಲಕ ಹಾಗೂ ಮಾಲಿಕರಾಗಿದ್ದ ಜಾನು ನಾಯ್ಕ ಸೇವಾ ಕಾರ್ಯದಲ್ಲಿ ಸದಾ ಮುಂದಿರುತ್ತಿದ್ದರು. ಗಂಭೀರವಾಗಿ ಗಾಯವಾಗಿರುವ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಅಂಬುಲೆನ್ಸ್ ನಲ್ಲಿದ್ದ ರೋಗಿಯನ್ನು ಹೊನ್ನಾವರ ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಕುಮಟಾದಿಂದ ಹೊನ್ನಾವರ ಕಡೆಗೆ ಹೋಗುತ್ತಿದ್ದ ಅಂಬುಲೆನ್ಸ್ ಗೆ ಎದುರಿನಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಅಂಬುಲೆನ್ಸ್ ನುಜ್ಜು ಗುಜ್ಜಾಗಿದೆ.
ರೋಗಿಯನ್ನು ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭದಲ್ಲಿಯೇ ಈ ಘಟನೆ ನಡೆದಿರುವುದು ಖೇದಕರ ಸಂಗತಿಯಾಗಿದೆ.
ಶ್ರೀ ರಾಮಕೃಷ್ಣ ಗಣಪತಿ ಪ್ರಸಾದ ಪ್ರಾಯ 70 ವರ್ಷ ಗೋಕರ್ಣ ಇವರನ್ನು ಗೋಕರ್ಣದಿಂದ ಹೊನ್ನಾವರದ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಗೆ ತರುತ್ತಿದ್ದ ಆಂಬುಲೆನ್ಸ್ ವಾಹನಕ್ಕೆ ಮಂಗಳೂರಿನಿಂದ ಕುಮಟಾ ಕಡೆಗೆ ಹೋಗುವ ಗ್ಯಾಸ್ ಟ್ಯಾಂಕರ್ ಲಾರಿ ಚಾಲಕನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ತನ್ನ ಗ್ಯಾಸ್ ಟ್ಯಾಂಕರ್ ಲಾರಿಯನ್ನು ಚಲಾಯಿಸಿಕೊಂಡು ಬಂದು ಗಂಟೆ ಸುಮಾರಿಗೆ ಹೊನ್ನಾವರ ಪಟ್ಟಣದ ರಾಮತೀರ್ಥ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 66 ರಲ್ಲಿ ಢಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಅಂಬುಲೆನ್ಸ್ ನಲ್ಲಿದ ಪಿಡ್ಸ್ ಖಾಯಿಲೆ ಪೀಡಿತ ಶ್ರೀ ರಾಮಕೃಷ್ಣ ಗಣಪತಿ ಪ್ರಸಾದ ಪ್ರಾಯ 70 ವರ್ಷ ಸಾ// ಗೋಕರ್ಣ ಇವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಂಬುಲೆನ್ಸ್ ಚಾಲಕ ರಾದ ಶ್ರೀ ಜಾನು ದತ್ತಾ ನಾಯ್ಕ ಪ್ರಾಯ 45 ವರ್ಷ ಬಗ್ಗೋಣ ಕ್ರಾಸ್ ಕುಮಟಾ ಇವರು ಗಂಭೀರ ಗಾಯಗೊಂಡಿದ್ದು ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆದರ್ಶ ಆಸ್ಪತ್ರೆಗೆ ಕಳಿಸಲಾಗಿದ್ದು ಅಂಬುಲೆನ್ಸ್ ವಾಹನದಲ್ಲಿ *ಪೇಷಂಟ್ ಜೊತೆಗಿದ್ದ ಶ್ರೀ ಬಾಲಚಂದ್ರ ಗಣಪತಿ ಪ್ರಸಾದ್ ಪ್ರಾಯ 37 ವರ್ಷ ಗೋಕರ್ಣ ಹಾಗೂ ಸುಮನಾ ತಂದೆ ರಾಮಾ ಗೌಡ ಪ್ರಾಯ 50 ವರ್ಷ ತಾಳಮಕ್ಕಿ ಗೋಕರ್ಣ ಇವರು ಅಪಘಾತದಲ್ಲಿ ಗಾಯಗೊಂಡಿದ್ದು ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ಯಾಸ್ ಟ್ಯಾಂಕರ್ ಲಾರಿ ಚಾಲಕ ಪರಾರಿಯಾಗಿದ್ದು, ಅಪಘಾತ ಸ್ಥಳದಿಂದ ಅಪಘಾತಕ್ಕೀಡಾದ ವಾಹನಗಳನ್ನು ಸ್ಥಳಾಂತರಿಸಿ ರಸ್ತೆ ಸಂಚಾರ ಸುಗಮಗೊಳಿಸಲಾಗಿರುತ್ತದೆ. ಅಪಘಾತದ ಬಗ್ಗೆ ಗ್ಯಾಸ್ ಟ್ಯಾಂಕರ್ ಲಾರಿ ಚಾಲಕನ ವಿರುದ್ದ ಪ್ರಕರಣ ದಾಖಲಿಸಲಾಗುತ್ತಿದೆ.