ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಆದ್ಯತೆ ಅನುಸಾರ ಲಸಿಕೆಯನ್ನು ನೀಡುತ್ತಾ ಬರಲಾಗಿದೆ. ಲಸಿಕೆಯ ಬೇಡಿಕೆ ಈಗಾಗಲೇ ಹೆಚ್ಚಾಗುತ್ತಿದ್ದು… ಅದಕ್ಕಾಗಿ ಸರಕಾರ ಆದ್ಯತೆಯ ಅನುಸಾರ ಲಸಿಕೆ ಪ್ರಕ್ರಿಯೆಯನ್ನು ನಡೆಸುತ್ತಾ ಬಂದಿದೆ. ಆ ಪ್ರಕಾರ ಆರೋಗ್ಯ ಕಾರ್ಯಕರ್ತರು, ಕೆಲವು ಸರಕಾರಿ ನೌಕರರು, ಸರ್ಕಾರಿ ಸಾರಿಗೆ ನೌಕರರು, ಆಟೋ ಮತ್ತು ಕ್ಯಾಬ್ ಡ್ರೈವರ್, ಅಂಚೆ ಇಲಾಖೆಯ ನೌಕರರು, ನ್ಯಾಯಾಲಯದ ಅಧಿಕಾರಿಗಳು, ಮಾಧ್ಯಮ ಮತ್ತು ಔಷಧೀಯ ಕ್ಷೇತ್ರದ ನೌಕರರು, ಎಪಿಎಂಸಿ ನೌಕರರು ಹೀಗೆ ಹಲವು ಕ್ಷೇತ್ರದ ನೌಕರರನ್ನು ಫ್ರಂಟ್ಲೈನ್ ಕೋವಿಡ್ ವರ್ಕರ್ಸ್ ಎಂದು ಗುರುತಿಸಿ ಲಸಿಕೆ ತೆಗೆದುಕೊಳ್ಳಲು ಆದ್ಯತೆ ನೀಡಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ನೇರವಾಗಿ ಬೆರೆಯುವ ಸಹಕಾರಿ ಸಂಘಗಳ ಸಿಬ್ಬಂದಿಗಳನ್ನು ಕಡೆಗಣಿಸಲಾಗಿದೆ. ಸಹಕಾರಿ ಸಂಘದ ಸಿಬ್ಬಂದಿ ಗಳು ಸಾಲ ವಸೂಲಾತಿ, ಬೆಳೆ ಸಾಲ ವಿತರಣೆ, ಕಿರಾಣಿ ದಿನಸಿಯನ್ನು ಹಾಗೂ ಪಡಿತರ ವಿತರಣೆಯನ್ನು ಮಾಡುತ್ತಿವೆ. ವಿವಿಧ ಕ್ಷೇತ್ರಗಳಲ್ಲಿ ಸಾರ್ವಜನಿಕರೊಂದಿಗೆ ನೇರವಾಗಿ ಸಂಪರ್ಕಕ್ಕೆ ಬರುವವರು ಸಹಕಾರಿ ಸಂಘಗಳ ಸಿಬ್ಬಂದಿಗಳೇ ಆಗಿದ್ದಾರೆ. ಕೊರೋನಾ ಮೊದಲನೆಯ ಆಲೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪಡಿತರ ದಿನಸಿ ಸೇರಿದಂತೆ ಹಲವು ಅವಶ್ಯಕ ವಸ್ತುಗಳನ್ನು ಪೂರೈಸಲು ಮುನ್ನೆಲೆಯಲ್ಲಿ ನಿಂತಿದ್ದಾರೆ. ಸಾರ್ವಜನಿಕರೊಂದಿಗೆ ಸಂಪರ್ಕಕ್ಕೆ ಬರುವ ಇವರು ಯಾವ ಸಮಯದಲ್ಲಿ ಸೋಂಕಿಗೆ ತುತ್ತಾಗಬಹುದು. ಈ ಬಗ್ಗೆ ಸರಕಾರ ಗಮನ ಹರಿಸಬೇಕು. ಸಹಕಾರಿ ಸಂಘದ ಸಿಬ್ಬಂದಿಗಳಿಗೂ ಬೇಗನೇ ಲಸಿಕೆ ನೀಡುವ ಕ್ರಮ ಕೈಗೊಳ್ಳಬೇಕು. ಕಳೆದ ವರ್ಷ ಸಹಕಾರಿ ಇಲಾಖೆ ಹಾಗೂ ಸಚಿವ ಸೋಮಶೇಖರ್ ಅವರ ಆದೇಶದಂತೆ ಕೊರೊನಾ ವಾರಿಯರ್ಸ್ ಎಂದು ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಎಲ್ಲ ಸಹಕಾರಿ ಸಂಘಗಳು ಅವರನ್ನು ಗೌರವಿಸಿವೆ. ಹಾಗೂ ದೇಣಿಗೆ ಸಂಗ್ರಹಿಸಲು ಆದೇಶ ಹೊರಡಿಸಲಾಗಿತ್ತು. ಆದರೆ ಸೋಮಶೇಖರ್ ಅವರಿಗೆ ತಮ್ಮ ಇಲಾಖೆಯ ಸಿಬ್ಬಂದಿಗಳಿಗೆ ಲಸಿಕೆ ನೀಡಲು ಕ್ರಮ ತೆಗೆದುಕೊಳ್ಳಬೇಕೆಂದು ನೆನಪಾಗದಿರುವುದು ವಿಪರ್ಯಾಸ ಎಂದು ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಟಿಎಂಎಸ್ ಉಪಾಧ್ಯಕ್ಷರೂ ಆಗಿರುವ ಎಂ ಪಿ ಹೆಗಡೆ ಕೊಟ್ಟೆಗದ್ದೆ ಪ್ರಕಟಣೆ ಮೂಲಕ ಹೇಳಿದ್ದಾರೆ.
ಪ್ರಸ್ತುತ ಕೊರೊನಾ ಎರಡನೆಯ ಅಲೆಯ ಸಂದರ್ಭದಲ್ಲಿ ಸಹಕಾರ ಸಿಬ್ಬಂದಿಗಳು ಪರಿಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಲಸಿಕೆ ನೀಡುವಂತಾಗಲಿ, ನಮ್ಮ ಸಿಬ್ಬಂದಿಗಳ ಆರೋಗ್ಯ ಮುಖ್ಯ ಎಂದು ಎಂ ಪಿ ಹೆಗಡೆ ಕೊಟ್ಟೆಗದ್ದೆ ಈ ಸಂದರ್ಭದಲ್ಲಿ ತಿಳಿಸಿದರು.