ಕುಮಟಾ: ಕೋವಿಡ್-19 ಎರಡನೆಯ ಅಲೆಯು ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಲಾಕ್‍ಡೌನ್ ಆದೇಶ ಜಾರಿಗೊಳಿಸಿದೆ. ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಪರಿಸ್ಥಿತಿಯಲ್ಲಿಯೂ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ 1250 ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಘೋಷಿಸಿರುವುದು ಸಂಕಷ್ಟದಲ್ಲಿರುವ ಜನತೆಗೆ ಸ್ಪಂದಿಸಿದಂತಾಗಿದೆ. ಅದೇರೀತಿ ಕೊರೊನಾ, ಮತ್ಸ್ಯಕ್ಷಾಮ ಹಾಗೂ ತೌಕ್ತೆ ಚಂಡಮಾರುತದಿಂದ ನಷ್ಟ ಅನುಭವಿಸಿದ ಮೀನುಗಾರರಿಗೂ ವಿಶೇಷ ಪ್ಯಾಕೇಜ್ ಘೋಷಿಸಿ, ಮೀನುಗಾರರ ಕಷ್ಟಕ್ಕೆ ಒದಗಬೇಕು ಎಂದು ಬಿಜೆಪಿ ಪ್ರಮುಖ ನಾಗರಾಜ ನಾಯಕ ತೊರ್ಕೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕೊರೊನಾ ಮಧ್ಯೆಯೇ ತೌಕ್ತೆ ಚಂಡಮಾರುತದ ತನ್ನ ಕರಾಳ ರೂಪವನ್ನು ಪ್ರದರ್ಶಿಸಿದ್ದು, ಇದರಿಂದ ಕರಾವಳಿ ತೀರದ ಮೀನುಗಾರರಿಗೆ ಹಾಗೂ ಕೃಷಿಕರಿಗೆ ಅಪಾರ ಹಾನಿಯುಂಟಾಗಿದೆ. ನಮ್ಮ ಬಿಜೆಪಿ ಸರ್ಕಾರವು ಮೀನುಗಾರರಿಗೆ ವಿಶೇಷ ಪ್ಯಾಕೇಜ್ ನೀಡುವಂತಾಗಿ, ಬಡ ಮೀನುಗಾರರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಕೋವಿಡ್-19 ಎರಡನೆಯ ಅಲೆಯು ತನ್ನ ಕರಾಳ ಛಾಯೆಯ ಬಿಸಿಯಿಂದ ಹಲವಾರು ಜನರ ಪ್ರಾಣವನ್ನು ತೆಗೆದುಕೊಂಡಿದೆ. ಕೆಲವರ ಆರೋಗ್ಯದ ಸ್ಥಿತಿ ಹದಗೆಟ್ಟಿದೆ. ಇಂಥ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಹಗಲಿರುಳು ಕೋವಿಡ್ ವಿರುದ್ಧ ಸಮರ ಸಾರುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ವೈದ್ಯರು, ಪೆÇಲೀಸ್ ಇಲಾಖೆ, ಕಂದಾಯ ಇಲಾಖೆ, ತಾ.ಪಂ, ಗ್ರಾ.ಪಂ ಜನಪ್ರತಿನಿಧಿಗಳು ಹಾಗೂ ಮಾಧ್ಯಮದವರು ಮತ್ತು ಭಾಜಪಾ ಕೋವಿಡ್ ನಿಯಂತ್ರಣ ತಂಡ ಸೇರಿದಂತೆ ಇತರರ ಸಹಕಾರದಿಂದ ಕೊರೊನಾ ಸ್ವಲ್ಪ ಇಳಿಮುಖವಾಗುತ್ತಿದೆ. ಇದರಿಂದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದ್ದು, ಇಷ್ಟು ದಿನ ಜಿಲ್ಲಾಧಿಕಾರಿಗಳು, ಸಂಸದರು, ಶಾಸಕರು ಮತ್ತು ವಿವಿಧ ಜನಪ್ರತಿನಿಧಿಗಳೊಂದಿಗೆ ಸ್ಪಂದಿಸಿದ ನಮ್ಮ ಜಿಲ್ಲೆಯ ಪ್ರಜ್ಞಾವಂತ ಜನತೆ ಇನ್ನೂ ಸ್ವಲ್ಪ ದಿನ ಸಹಕರಿಸಿದಲ್ಲಿ ಕೋವಿಡ್ ಮುಕ್ತ ಜಿಲ್ಲೆಯನ್ನಾಗಿಸಲು ನಮ್ಮಿಂದ ಸಾಧ್ಯವಿದೆ ಎಂದರು.
ಜಿಲ್ಲೆಯ ಮೀನುಗಾರರು ಕಳೆದ ವರ್ಷದಿಂದ ಆರ್ಥಿಕ ನಷ್ಟ ಎದುರಿಸುತ್ತಿದ್ದು, ಕಳೆದ ವರ್ಷದ ಪ್ರಕೃತಿ ವಿಕೋಪ, ಕೊರೊನಾ, ಮತ್ಯ್ಸಕ್ಷಾಮ ಹಾಗೂ ಈ ಬಾರಿಯ ಕೊರೊನಾ ಮತ್ತು ತೌಕ್ತೆ ಚಂಡಮಾರುತದಿಂದ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಇದರಿಂದ ಕಡಲ ಮಕ್ಕಳು ಬದುಕು ಸಾಗಿಸುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ನಮ್ಮ ಬಿಜೆಪಿ ಸರ್ಕಾರ ಆದಷ್ಟು ಶೀಘ್ರದಲ್ಲಿ ಮೀನುಗಾರರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಿ, ಸಹಕರಿಸಬೇಕು ಎಂದು ಅವರು ಒತ್ತಾಯಿಸಿದರು