ಗೋಕರ್ಣ: ಒಂದು ದೀಪದಿಂದ ಸಾವಿರ ದೀಪಗಳು ಹೊತ್ತಿಕೊಳ್ಳುವಂತೆ ಒಬ್ಬ ಸಾಧಕ ಅಸಂಖ್ಯಾತ ಯುವ ಮನಸ್ಸುಗಳಿಗೆ ಪ್ರೇರಣೆಯಾಗಬಲ್ಲರು. ಇಂಥ ಜ್ಞಾನ ದೀಪೋತ್ಸವ ನಿರಂತರವಾದಾಗ ಇಡೀ ದೇಶ ಪ್ರಜ್ವಲಿಸಬಲ್ಲದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಶ್ರೀರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಸಾಧನೆಯ ಮಾರ್ಗ’ ಎಂಬ ಅಂತರ್ಜಾಲ ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಅತ್ಯಂತ ಕಿರಿಯ ವಯಸ್ಸಿನಲ್ಲೇ ಮಹತ್ಸಾಧನೆ ಮಾಡಿ ದೇಶ ಹಾಗೂ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಡಾ.ಕಾರ್ತಿಕ್ ಹೆಗಡೆಕಟ್ಟಿ ಇಂಥ ಸ್ಫೂರ್ತಿದಾಯಕ ವ್ಯಕ್ತಿತ್ವ. ಅವರ ಪ್ರೇರಣಾದಾಯಕ ಮಾತುಗಳು ಎಷ್ಟೋ ಯುವ ಮನಸ್ಸುಗಳಲ್ಲಿ ಜ್ಞಾನದೀಪ ಬೆಳಗಲು ಕಾರಣವಾಗಿವೆ. ಸಾಮಾನ್ಯವಾಗಿ ದೀಪೋತ್ಸವವನ್ನು ಹಳ್ಳಿಗಳಲ್ಲಿ ಕಾರ್ತಿಕ ಎಂದು ಕರೆಯುತ್ತೇವೆ. ಒಂದು ದೀಪದಿಂದ ಸಹಸ್ರ ಸಹಸ್ರ ದೀಪಗಳನ್ನು ಬೆಳಗಿಸಿ ಇಡೀ ಪ್ರದೇಶವೇ ಬೆಳಗುವಂತೆ ಮಾಡುವುದೇ ದೀಪೋತ್ಸವ. ಜ್ಞಾನ ಪ್ರಸಾರದಲ್ಲೂ ಇಂಥ ದೀಪೋತ್ಸವ ನಿರಂತರವಾಗಬೇಕು ಎಂದು ಸ್ವಾಮೀಜಿ ಆಶಿಸಿದರು.

ಪ್ರಮುಖ ಉಪನ್ಯಾಸ ನೀಡಿದ ನವದೆಹಲಿಯ ಪ್ರಧಾನಿ ಕಚೇರಿ ಉಪ ಕಾರ್ಯದರ್ಶಿ, ಕಾರವಾರ ಮೂಲದ ಯುವ ಐಎಎಸ್ ಅಧಿಕಾರಿ ಡಾ.ಕಾರ್ತಿಕ್ ಹೆಗಡೆಕಟ್ಟ ಅವರು, “ಸಾವಿರ ಮೈಲಿಯ ಪ್ರವಾಸ ಒಂದು ಹೆಜ್ಜೆಯಿಂದ ಆರಂಭವಾಗುತ್ತದೆ ಎನ್ನುವುದು ಯಶಸ್ಸಿನ ಮೂಲಸೂತ್ರ. ನಮ್ಮ ಜೀವನದ ಯಶಸ್ಸಿನ ದಾರಿಗೂ ಇದೇ ಮೂಲಮಂತ್ರ” ಎಂದು ಬಣ್ಣಿಸಿದರು.

RELATED ARTICLES  ಕೊರೋನಾ ತುರ್ತು ಪರಿಸ್ಥಿತಿಯಲ್ಲಿ ಉ.ಕ ಜಿಲ್ಲೆಯ ನೆರವಿಗೆ ಧಾವಿಸಿದ ಇನ್ಫೋಸಿಸ್‌ನ ಮುಖ್ಯಸ್ಥೆ ಸುಧಾಮೂರ್ತಿ..!

ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯಿಂದಾಗಿ ದೇಶದ ಶಿಕ್ಷಣ ವ್ಯವಸ್ಥೆ ಸುಧಾರಿಸಲಿದೆ. ವಿದ್ಯಾರ್ಥಿಗಳು ಎಳವೆಯಲ್ಲೇ ಹೆಚ್ಚು ಹೆಚ್ಚು ಓದುವ ಹಂಬಲ ಬೆಳೆಸಿಕೊಂಡು, ಸಾಧಿಸುವ ಛಲ ಬೆಳೆಸಿಕೊಳ್ಳಬೇಕು. ನಮ್ಮ ಜ್ಞಾನದಿಗಂತವನ್ನು ವಿಸ್ತರಿಸಿಕೊಂಡಷ್ಟೂ ನಮ್ಮ ಯಶಸ್ಸು ಸುಲಭವಾಗುತ್ತದೆ. ಇತರರ ಅನುಭವದಿಂದ ನಾವು ಕಲಿತುಕೊಳ್ಳುವುದು ನಮಗೆ ಬಹಳಷ್ಟು ಸಮಯ ಉಳಿಸುತ್ತದೆ. ತರಗತಿಯಲ್ಲಿ ಕಲಿತದ್ದನ್ನು ಜೀವನದಲ್ಲಿ ಹಾಗೂ ವಿಸ್ತøತವಾಗಿ ಸಮಾಜಕ್ಕೆ ಅನ್ವಯಿಸುವ ಪ್ರಯತ್ನ ನಿರಂತರವಾಗಿ ಸಾಗಬೇಕು ಎಂದು ಕಿವಿಮಾತು ಹೇಳಿದರು.
ನಾವು ಯಾವ ವಿಷಯದಲ್ಲೇ ನೈಪುಣ್ಯ ಪಡೆದರೂ, ಹೊಸ ಹೊಸ ವಿಷಯಗಳನ್ನು ಕಲಿಯುವ, ಅದರಲ್ಲಿ ಸಾಧನೆ ಮಾಡುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದ ಅವರು, “ನಾನು ವೈದ್ಯಶಿಕ್ಷಣ ಪಡೆದರೂ, ಸಮಾಜಕ್ಕೆ ವಿಸ್ತøತ ಸೇವೆ ಸಲ್ಲಿಸಬೇಕು ಎಂಬ ಅದಮ್ಯ ಬಯಕೆಯಿಂದ ಅಖಿಲ ಭಾರತ ನಾಗರಿಕ ಸೇವೆಗೆ ಸೇರಿಕೊಂಡೆ. ಇದೀಗ ಪ್ರಧಾನಿ ಕಾರ್ಯಾಲಯದಲ್ಲಿ ನನ್ನ ಹೊಣೆ ರೈಲ್ವೆ ಮತ್ತು ತಂತ್ರಜ್ಞಾನ ಕ್ಷೇತ್ರ” ಎಂದು ತಮ್ಮದೇ ಉದಾಹರಣೆಯೊಂದಿಗೆ ಸಾಧನೆಯ ಮಾರ್ಗವನ್ನು ತೆರೆದಿಟ್ಟರು.
“ನಮ್ಮ ಪರಿಣತಿ ಯಾವ ವಿಷಯದಲ್ಲಿ ಇದ್ದರೂ, ಸಮಾಜಕ್ಕೆ, ಜನತೆಗೆ ಅದು ಎಷ್ಟು ಉಪಯೋಗವಾಗುತ್ತದೆ ಎನ್ನುವುದು ಮುಖ್ಯ. ನಮ್ಮ ಮನಸ್ಸನ್ನು ಮುಕ್ತವಾಗಿ ಇರಿಸಿಕೊಂಡಷ್ಟೂ ನಮ್ಮ ಸಾಧನೆಯ ಹಾದಿ ಸರಳವಾಗುತ್ತದೆ. ಮನಸ್ಸನ್ನು ಸದಾ ಧನಾತ್ಮಕ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಅಗತ್ಯ. ಋಣಾತ್ಮಕ ಚಿಂತನೆಯಿಂದ ಮನಃಶಾಂತಿ ಹಾಳಾಗುತ್ತದೆ. ಮನಸ್ಸು ಧನಾತ್ಮಕವಾಗಿರಲು ಯೋಗ, ಧ್ಯಾನ, ಪ್ರಾಣಾಯಾಮ ಪೂರಕವಾಗುತ್ತದೆ ಎಂದು ವಿಶ್ಲೇಷಿಸಿದರು.

RELATED ARTICLES  ಎಂಜಿನಿಯರಿಂಗ್ ಕಾಲೇಜ್ ಸ್ಥಳಾಂತರಕ್ಕೆ ರಾಜಕಾರಣ: ವಿದ್ಯಾರ್ಥಿಗಳಿಂದ ಮನವಿ

“ಸಾಧನೆ ಮಾಡುವ ಛಲ ಮನಸ್ಸಿನಲ್ಲಿ ಮೂಡಿದಾಗ ಯಶಸ್ಸಿನ ಪಥದಲ್ಲಿ ನಿಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ. ನಮ್ಮ ದೇಹಕ್ಕೆ ಗಾಳಿ ಎಷ್ಟು ಮುಖ್ಯವೋ ಜೀವನದಲ್ಲಿ ಸಾಧನೆಯೂ ಮುಖ್ಯ ಎಂಬ ಮನೋಭಾವ ಬೆಳೆಯಬೇಕು. ಆಗ ಸಹಜವಾಗಿಯೇ ಯಶಸ್ಸಿನತ್ತ ಮುನ್ನಡೆಯುತ್ತೀರಿ. ಸಾಧನೆಯ ಗುರುತನ್ನು ಎಲ್ಲೂ ಬಿಡಬಾರದು. ಇದೇ ಯಶಸ್ಸಿನ ಸೂತ್ರ ಎಂದು ವಿವರಿಸಿದರು.

ವಿದ್ಯಾ ಪರಿಷತ್ ಅಧ್ಯಕ್ಷ ಎಂ.ಆರ್.ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಮರುವಳ ನಾರಾಯಣ ಭಟ್, ಆಡಳಿತಾಧಿಕಾರಿ ಸುರೇಂದ್ರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಎಸ್.ಜಿ.ಭಟ್ ಕಬ್ಬಿನಗದ್ದೆ ಸ್ವಾಗತಿಸಿದರು. ಪ್ರಾಚಾರ್ಯ ಗುರುಮೂರ್ತಿ ಮೇಣ ಕಾರ್ಯಕ್ರಮ ನಿರೂಪಿಸಿದರು. ನಿಕಿತಾ ಹೆಗಡೆ ಪ್ರಾರ್ಥಿಸಿದರು.
======================