ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು (ರಿ) ಮೈಸೂರು ಇದರ ನಿರೂಪಕರು ಹಾಗೂ ಭಾಷಣಕಾರ ಶಿಕ್ಷಕರ ಸಮಿತಿಯ ವತಿಯಿಂದ ಆನ್ ಲೈನ್ ನಲ್ಲಿ ಪರಿಚಯಾತ್ಮಕ ಕಾರ್ಯಕ್ರಮ ನಡೆಯಿತು. ಕೋವಿಡ್-19 ರ ಕಾರಣದಿಂದ ಆನ್ ಲೈನ್ ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ಮಾಡಿಕೊಡಲಾಗಿತ್ತು. ನಿರೂಪಕರು ಹಾಗೂ ಭಾಷಣಕಾರ ಶಿಕ್ಷಕರ ಸಮಿತಿಯ ರಾಜ್ಯ ಉಸ್ತುವಾರಿಗಳೂ ಹಾಗೂ ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯ ನಿರ್ದೇಶಕರೂ ಆದ ರವೀಂದ್ರ ಭಟ್ಟ ಸೂರಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ” ನಾವು ಮಾಡುವ ಕೆಲಸದಲ್ಲಿ ಬದ್ಧತೆ,ಸಿದ್ಧತೆ,ಶುದ್ಧತೆ ಇರಬೇಕು. ಇದು ಯಶಸ್ಸಿನ ಗುಟ್ಟು. ನಮ್ಮ ಮಾತು ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಉತ್ತಮ ಮಾತುಗಾರರನ್ನು ಹಾಗೂ ನಿರೂಪಕರನ್ನು ರೂಪಿಸುವ ಗುರುತರ ಜವಾಬ್ದಾರಿ ನಮ್ಮ ಸಮಿತಿಗಿದೆ. ಎಲ್ಲರ ಸಹಕಾರದಿಂದ ಅದನ್ನು ಸಮರ್ಥವಾಗಿ ನಿರ್ವಹಿಸೋಣ” ಎಂದರು. ಪರಿಷತ್ತಿನ ರಾಜ್ಯಾಧ್ಯಕ್ಷರಾದ ಪಿ.ಮಹೇಶರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಮಿತಿಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.
ಸಮಿತಿ ನಮ್ಮ ನಿರೀಕ್ಷಿತ ಮಟ್ಟವನ್ನು ತಲ್ಪುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. ಪ್ರಧಾನ ಕಾರ್ಯದರ್ಶಿ ಮಹಾಂತೇಶ ಚೌಹಾಣ, ರಾಜ್ಯ ಉಪಾಧ್ಯಕ್ಷರಾದ ಶಂಕರ ಕ್ಯಾಸ್ತಿಅತಿಥಿಗಳಾಗಿ ಭಾಗವಹಿಸಿ ಮಾರ್ಗದರ್ಶನ ಮಾಡಿದರು. ಸಮಿತಿಯ ಮುಖ್ಯಸ್ಥರಾದ ಲಕ್ಷ್ಮೀಬಾಯಿ ಕಂಬಾರ ಸಮಿತಿಯ ಗುರಿ ಉದ್ದೇಶಗಳನ್ನು ತಿಳಿಸಿ ಕಾರ್ಯನಿರ್ವಹಣೆಗೆ ಎಲ್ಲರ ಸಹಕಾರವನ್ನು ಕೋರಿದರು. ಸತೀಶ ಶೆಟ್ಟಿ ಸ್ವಾಗತಿಸಿದರು. ಜುಬೇದಾಬೇಗಂ ಅತ್ತಾರ ವಂದಿಸಿದರು. ಪರವೀನ್ ನದಾಫ್ ನಿರೂಪಿಸಿದರು. ಶಿವು ಮಡಿಕೇಶ್ವರ ನಿರ್ವಹಿಸಿದರು.