ಕುಮಟಾ: ಮನೆಯೊಂದರಲ್ಲಿ ಕಳ್ಳಬಟ್ಟಿ ಮಾರಾಟ ಮಾಡುವ ಪ್ರಕರಣ ಬೇಧಿಸುವಲ್ಲಿ ಕುಮಟಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಮನೆಯಲ್ಲಿ ಇರಿಸಲಾಗಿದ್ದ1600 ಮೌಲ್ಯದ ಸುಮಾರು 4 ಲೀಟರ್ ಕಳ್ಳಬಟ್ಟಿ ವಶಪಡಿಸಿಕೊಂಡಿರುವ ಘಟನೆ ತಾಲ್ಲೂಕಿನ ನಾಗೂರು ಗ್ರಾಮದ ಸಂತಗದ್ದೆಯ ಕ್ಯಾದಗೆಪಾಲ್ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ನಾರಾಯಣ ಮರಾಠಿ ಪರಾರಿಯಾದ ಆರೋಪಿಯಾಗಿದ್ದು ಈತ ತನ್ನ ಮನೆಯಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಮಾಹಿತಿ ಲಭಿಸಿದ್ದು ನ್ಯಾಯಾಲಯದ ಆದೇಶ ಮೇರೆಗೆ ಕುಮಟಾ ಸಿ.ಪಿ.ಐ ಶಿವಪ್ರಕಾಶ ನಾಯ್ಕ ಹಾಗೂ ಪಿ.ಎಸ್.ಐ ಆನಂದಮೂರ್ತಿ,ರವಿ ಗುಡ್ಡಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ದಾಳಿ ನಡೆಸಿದ್ದರು.
ಆರೋಪಿ ಮನೆಯ ಹಿಂಭಾಗದ ತೋಟದ ಮೂಲಕ ಪರಾರಿಯಾಗಿರುವುದಾಗಿ ವರದಿಯಾಗಿದೆ. ಪೊಲೀಸರು ಆರೋಪಿಯ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ, ಈ ಬಗ್ಗೆ ಕರ್ನಾಟಕ ಅಬಕಾರಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ.