ಹೊನ್ನಾವರ: ಕೊರೋನಾ ಜನತೆಗೆ ಅನೇಕ ವಿಧದ ಸಂಕಷ್ಟವನ್ನು ತಂದೊಡ್ಡುತ್ತಿದೆ, ಒಂದು ತುತ್ತಿಗೂ ಪರಿತಪಿಸುವ ಪರಿಸ್ಥಿತಿ ಅನೇಕರದು, ನಿತ್ಯ ದುಡಿದು ನಿತ್ಯವೂ ಎರಡುಹೊತ್ತಿನ ಊಟವನ್ನು ಮಾಡಿ ಬದುಕುತ್ತಿದ್ದ ಜನರ ಕಷ್ಟ ಅಷ್ಟಿಷ್ಟಲ್ಲ. ಇದಕ್ಕೆಲ್ಲ ಕೊರೋನಾ ಹಾಗೂ ಅದರ ನಿಯಂತ್ರಣಕ್ಕೆ ಕೈಗೊಂಡ ಲಾಕ್ ಡೌನ್ ಕಾರಣವಾಗಿದೆ.
ಈ ಸಂದರ್ಭದಲ್ಲಿನ ಜನರ ಕಷ್ಟವನ್ನು ಮನಗಂಡ ಅನೇಕರು ಬಡ ಜನರಿಗೆ ನೆರವಾಗುತ್ತಿರುವುದು ಮಾನವೀಯ ಮೌಲ್ಯವನ್ನು ಎತ್ತಿಹಿಡಿದಿದೆ. ಈ ರೀತಿಯಾಗಿ ಜನರ ಜೊತೆಗೆ ಸ್ಪಂದಿಸಿದವರು ಹಳದೀಪುರದ ನರೇಶ ಪೈ ಹಾಗೂ ಅವರ ಕುಟುಂಬವೂ ಒಂದು.
ನರೇಶ ಪೈ ಮತ್ತು ಅವರ ಪತ್ನಿ ಧನಶ್ರೀ ಪೈ ಜನತೆಯ ಕಷ್ಟವನ್ನು ಅರಿತು ಅನೇಕ ಕುಟುಂಬಕ್ಕೆ ದಿನನಿತ್ಯದ ಅಗತ್ಯ ವಸ್ತುಗಳನ್ನು ಪೂರೈಸಿ, ಕರೋನಾ ಸಂಕಷ್ಟದ ಕಾಲದಲ್ಲಿ ಜನತೆಯ ಜೊತೆಗೆ ನಿಂತು ಮಾದರಿಯಾಗಿದ್ದಾರೆ.
ನರೇಶ ಪೈ ಕಂಪನಿಯೊಂದರಲ್ಲಿ ಕಾರ್ಯ ಮಾಡುತ್ತಿದ್ದವರು ಅವರ ಪತ್ನಿ ಚಾರ್ಟೆಡ್ ಎಕೌಂಟೆಂಟ್ ಧನಶ್ರೀ ನರೇಂದ್ರ ಪೈ ಕೂಡಾ ಈ ಕಡು ಬಡವರಿಗೆ ನೆರವಾಗುವ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಇವರ ಜೊತೆಗೆ ಅನೇಕ ಐ.ಟಿ ಉದ್ಯೋಗಿಗಳು ಇವರ ಕಾರ್ಯಕ್ಕೆ ನೆರವಾಗಿ ಮಾದರೀ ಕಾರ್ಯ ಮಾಡಿದ್ದಾರೆ.
ನರೇಶ ಪೈ ಹಳದೀಪುರದ ಪ್ರಸಿದ್ಧ ವ್ಯಾಪಾರಿ ಪ್ರೇಮಾನಂದ ಪೈ ಹಾಗೂ ಪ್ರಭಾ ಪೈ ಅವರ ಮಗನಾಗಿದ್ದು ಇವರ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇಂತಹ ಸಂಕಷ್ಟದ ಕಾಲದಲ್ಲಿ ಜನರಿಗೆ ಜೀವನಾವಶ್ಯಕ ವಸ್ತುವನ್ನು ನೀಡುವುದರ ಮೂಲಕ ಮೆಚ್ಚುಗೆಯ ಕಾರ್ಯ ಮಾಡಿದ ಕುಟುಂಬವನ್ನು ನಾವೆಲ್ಲರೂ ಅಭಿನಂದಿಸೋಣ