ವಿಶ್ವದಲ್ಲಿ ಯಾರೂ ಕೂಡ ಕನಸಿನಲ್ಲಿಯೂ ಊಹಿಸಲಾರದ ಸಂಕಷ್ಟದ ಪರಿಸ್ಥಿಯೊಂದು ನೆರೆಯ ಚೀನಾದ ಊಹಾನ ಎಂಬ ಪ್ರದೇಶಲ್ಲಿ ಉದ್ಭವಿಸಿ ಕೊರೊನಾ ಎಂಬ ಹೆಸರಿನಿಂದ ದಿನದಿನವೂ ಉಲ್ಬಣಿಸಿ ಸಮಸ್ತ ವಿಶ್ವವನ್ನೇ ತಲ್ಲಣಗೊಳಿಸಿದ್ದು ಜನಜೀವನವೇ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ.ಔದ್ಯಮಿಕ ಜಗತ್ತು ಮಕಾಡೆ ಮಲಗಿ ನಿರುದ್ಯೋಗ ಸಮಸ್ಯೆ ತಾಂಡವ ಆಡಲು ಶುರುವಿಟ್ಟಿದೆ.ಶಿಕ್ಷಣ ಕ್ಷೇತ್ರವಂತೂ ಅಯೋಮಯ ಎನ್ನುವಂತೆ ಆಗಿದೆ.ಆದರೂ ಕೂಡ ಮನುಷ್ಯ ಪ್ರಯತ್ನ ಇದೆಲ್ಲವನ್ನೂ ಎದುರಿಸಿ ಹೊಸ ನಾಡನ್ನು ಕಟ್ಟುವ ಕೈಂಕರ್ಯದಲ್ಲಿ ತೊಡಗಿದೆ.ಈ ಕೊರೊನಾ ಎಂಬ ಮಹಾಮಾರಿ ತಂದಿಟ್ಟ ಸಂಕಟದಿಂದ ಒಬ್ಬರನ್ನೊಬ್ಬರು ಪಾರುಮಾಡುವ ಯತ್ನ ಸತತವಾಗಿ ಸಾಗಿದೆ.ಸರಕಾರ, ವೈದ್ಯಲೋಕ,ಉದ್ಯಮರಂಗವನ್ನು ಒಳಗೊಂಡಂತೆ ಎಲ್ಲಾ ವಿಭಾಗದಲ್ಲೂ ಕೊರೊನಾ ಯೋಧರು ಸಿದ್ಧರಾಗಿ ಸೆಣಸುತ್ತಿದ್ದಾರೆ.ಇವುಗಳ ನಡುವೆಯೇ ಉತ್ತರಕನ್ನಡ ಜಿಲ್ಲೆಯ ಕುಮಟಾದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ ನ ಸಮಾಜ ಮುಖಿ ಕಾರ್ಯ ಎಲ್ಲರ ಗಮನವನ್ನು ಸೆಳೆಯುತ್ತಿದೆ.ಕಳೆದ ಇಪ್ಪತ್ತೇಳು ವರ್ಷಗಳ ಹಿಂದೆ ರಾಷ್ಟ್ರಪ್ರೇಮಿ,ಶಿಕ್ಷಣ ಪ್ರೇಮಿಗಳು ಸೇರಿ ಹುಟ್ಟುಹಾಕಿದ ಸಂಸ್ಥೆಯಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಉದ್ದೇಶ ಕೇವಲ ಶಿಕ್ಷಣ ಕ್ಷೇತ್ರದಲ್ಲಿನ ಪ್ರಗತಿಯನ್ನು ಸಾಧಿಸುವುದಲ್ಲದೇ ಸಮಾಜಮುಖಿ ರಾಷ್ಟ್ರಪ್ರೇಮಿ ವ್ಯಕ್ತಿತ್ವವನ್ನು ಪ್ರಜೆಗಳಲ್ಲಿ ಮೈಗೂಡಿಸುವುದಾಗಿದೆ.ಹಿಂದಿನಿಂದಲೂ ಅನೇಕ ಜನಪರ ಕಾರ್ಯಕ್ರಮಗಳಿಗೆ ,ಕ್ರೀಡಾಕೂಟಗಳಿಗೆ ,ಸಂಘ ಸಂಸ್ಥೆಗಳ ಸಭೆ ಸಮಾರಂಭಗಳಿಗೆ ಸಂಸ್ಥೆಯು ಉಚಿತ ಸ್ಥಳ ಹಾಗೂ ಊಟದ ವ್ಯವಸ್ಥೆಯನ್ನು ಮಾಡಿ ಸಹಕರಿಸಿದ ಅನೇಕ ಉದಾಹರಣೆಗಳಿವೆ.

ಕೊರೊನಾ ಮೊದಲ ಅಲೆಯು ಜನಮಾನಸದಲ್ಲಿ ಭಯಂಕರ ಹೆದರಿಕೆಯನ್ನು ಹಬ್ಬಿಸಿದ ಸಂದರ್ಭದಲ್ಲಿ ಕೊರೊನಾ ಸೋಂಕಿತರಿಗೆ ಕ್ವಾರಂಟೈನ್ ಕೇಂದ್ರ ತೆರೆಯುವ ಪ್ರಸ್ತಾಪ ಬಂದಾಗ ಕುಮಟಾದ ಕೆಲವೆಡೆ ವಿರೋಧ ವ್ಯಕ್ತವಾಗಿತ್ತು. ಆ ಸಂದರ್ಭದಲ್ಲಿ ಮುಂದಿನ ಭವಿಷ್ಯದ ಚಿಂತೆಯನ್ನು ಮಾಡದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ತನ್ನೆಲ್ಲ ಕಟ್ಟಡಗಳನ್ನೂ ಉದಾರವಾಗಿ ನೀಡಿ ಕೊರೊನಾ ಶಂಕಿತರಿಗೆ ಹಾಗೂ ಸೋಂಕಿತರಿಗೆ ವರವಾಗಿತ್ತು.ಈ ವೇಳೆ ಮುಂದೆಲ್ಲಿ ತಮ್ಮ ಮಕ್ಕಳಿಗೆ ಸಮಸ್ಯೆ ಎದುರಾದಿತೋ ಎಂದು ಆತಂಕ ಪಟ್ಟು ಕ್ವಾರಂಟೈನ ಕೇಂದ್ರಕ್ಕೆ ಸ್ಥಳ ನೀಡಬೇಡಿ ಎಂದು ಎಚ್ಚರಿಸಿದವರಿಗೆ ದೇಶಕ್ಕೆ ಸಂಕಷ್ಟ ಬಂದಾಗ ಕೈ ಜೋಡಿಸುವುದು ನಮ್ಮ ಧರ್ಮ ಎಂಬ ನಿಲುವಿಗೆ ಬದ್ಧವಾಗಿ ಸಂಪೂರ್ಣ ತನ್ನೆಲ್ಲಾ ಕಟ್ಟಡಗಳನ್ನೂ ನೀಡಿ ಸಹಕರಿಸಿದ ಸಂಸ್ಥೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್

RELATED ARTICLES  ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 28-10-2018 ರ ರಾಶಿ ಭವಿಷ್ಯ ಇಲ್ಲಿದೆ.

ಇದರ ಜೊತೆಗೆ ಸಂಸ್ಥೆಯಲ್ಲಿ ಕಲಿಯುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತವಾಗಿರ ಬಾರದು ಅವರು ದಿನದ ತರಗತಿಯಲ್ಲಿ ಪಾಠಕಲಿತ ಅನುಭವ ಪಡೆಯುಂವತಾಗಬೇಕೆಂಬ ಕಾರಣಕ್ಕೆ ಅಂತರ್ಜಾಲ ಮಾಧ್ಯಮದ ಮೂಲಕ ಯಶಸ್ವಿಯಾಗಿ ಶಿಕ್ಷಣವನ್ನು ನೀಡಿಕೊಂಡು ಬಂದಿರುವ ಸಂಸ್ಥೆಯ ಬೋಧಕ ವೃಂದದವರು ಯಾವುದೇ ಸಂದರ್ಭದಲ್ಲಿಯೂ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ,CET, NEET ,JEE ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿ ಇದುವರೆಗೂ ಸಂಸ್ಥೆಯು ಸಾಧಿಸಿಕೊಂಡು ಬಂದಂತ ಶೈಕ್ಷಣಿಕ ಸಾಧನೆಯನ್ನು ಮಾಡುವಲ್ಲಿ ವಿದ್ಯಾರ್ಥಿಗಳನ್ನು ಅಣಿಗೊಳಿಸಿರುವುದು ಪಾಲಕರ ವಲಯದಲ್ಲಿ ಹಾಗೂ ಶಿಕ್ಷಣ ಇಲಾಖೆಯ ದೃಷ್ಟಿಯಲ್ಲಿ ಮೆಚ್ಚುಗೆ ಗಳಿಸುತ್ತಿರುವುದು ವಿಶೇಷ ಸಂಗತಿಯಾಗಿದೆ.

ಈ ಬಾರಿ ದ್ವಿತೀಯ ಅಲೆಯಿಂದ ಮತ್ತೆ ತೊಂದರೆ ಎದುರಾದ ಸಂದರ್ಭದಲ್ಲಿ ಸ್ವತಃ ಸಂಸ್ಥೆಯೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರೂ ಲೆಕ್ಕಿಸದೇ ಕೊರೊನಾ ಸೈನಿಕರಿಗೆ ,ಹಗಲಿರುಳು ದುಡಿವವರಿಗೆ ಮುಖ್ಯ ರಸ್ತೆಯಲ್ಲಿ ಮಧ್ಯಾಹ್ನ ಹಾದುಹೋಗುವ ವಾಹನಗಳ ಚಾಲಕ ನಿರ್ವಾಹಕರುಗಳಿಗೆ ಹಾಗೂ ಬಡವರು ಅಶಕ್ತರಿಗೆ ಎಂದು ಸರಿಸುಮಾರು ಮೂರು ನೂರು ಮಂದಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ತನ್ನ ಪಾಕಶಾಲೆಯಲ್ಲೇ ಉಚಿತವಾಗಿ ಸಿದ್ಧಪಡಿಸುತ್ತಿದೆ.
ಶಾಲೆಯು ನೆಡೆಯುವ ಸಂದರ್ಭದಲ್ಲಿಯೂ ಸಹ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅತ್ಯಲ್ಪ ಶುಲ್ಕವಾಗಿ ಮಾಹೆಗೆ ಎರಡುನೂರು ರುಪಾಯಿ ಯನ್ನು ಪಡೆದು ಹಾಗೂ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಉತ್ಕೃಷ್ಟ ಊಟವನ್ನು ನೀಡುತ್ತಾ ಬಂದಿದೆ.

RELATED ARTICLES  ಮಿರ್ಜಾನ್ ಕುಮಟಾ ರಸ್ತೆಯಲ್ಲಿ ತುಂಬಿ ಹರಿದ ನೀರು..!

ಪ್ರಸ್ತುತ ಅನ್ನದಾಸೋಹಕ್ಕೆ ಸಂಸ್ಥೆಯಲ್ಲಿ ಕಲಿತಿರುವ ಹಿರಿಯ ವಿದ್ಯಾರ್ಥಿಗಳು ಹಾಗೂ ಅನೇಕ ದಾನಿಗಳು ನೆರವಾಗುತ್ತಿದ್ದಾರೆ.ಸೇವೆಯೆಂಬ ಯಜ್ಞದಲ್ಲಿ‌ ಸಮಿದೆಯಂತೆ ಉರಿಯುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಾಭಾರತಿಯ ಸ್ವಯಂ ಸೇವಕರು ಪ್ರತಿನಿತ್ಯ ಬಿಸಿಲು ಮಳೆಯನ್ನೂ ಲೆಕ್ಕಿಸದೇ ಊಟವನ್ನು ವ್ಯಕ್ತಿಗಳಿದ್ದ ಕಡೆಗೇ ಹೋಗಿ ವಿತರಿಸಿ ಜನಮನ ಗೆಲ್ಲುತ್ತಿದ್ದಾರೆ.

ಕೊಂಕಣ ಎಜ್ಯುಕೇಶನ್ ಟ್ರಸ್ಟ ಈ ಮೂಲಕ ತನ್ನ ಸ್ಥಾಪಿತ ಉದ್ದೇಶವು ಈಡೇರುತ್ತಿರುವ ಬಗ್ಗೆ ಸಾರ್ಥಕ ಭಾವನೆಯನ್ನು ತಳೆಯುತ್ತಿದೆ.ಅದರ ಒಡಲಲ್ಲಿ ಕಲಿತ ವಿದ್ಯಾರ್ಥಿಗಳು ಸಂಕಷ್ಟದ ಸಂದರ್ಭದಲ್ಲಿ ಸಂಪೂರ್ಣ ಊಟದ ಪ್ರಾಯೋಜಕತ್ವದ ಪ್ರಸ್ತಾವನೆ ಮಾಡಿರುವುದಂತೂ ಸಂಸ್ಥೆಗೆ ಅತ್ಯಂತ ಹರ್ಷ ಹಾಗೂ ಅಭಿಮಾನದ ಸಂಗತಿ ಆಗಿದೆ. ಈ ಕಾರ್ಯಕ್ಕೆ ಸಂಸ್ಥೆಯ ಸಿಬ್ಬಂದಿಗಳ ಸಹಕಾರ ಹಾಗೂ ಸಂಸ್ಥೆಯ ಹಿತಚಿಂತಕರಾದ ಆರ್ ಎಸ್ ಎಸ್ ನ ಸ್ವಯಂ ಸೇವಕರ ಸಹಯೋಗ..ಸಂಸ್ಥೆಯ ಧ್ಯೇಯ ವಾಕ್ಯವಾದ “ರಾಷ್ಟ್ರ ನಿರ್ಮಾಣದ ಮಂದಿರವಿದು ಕೈಮುಗಿದು ಒಳಗೆ ಬಾ”ಎಂಬ ಮಾತನ್ನು ದಿಟ ಗೊಳಿಸಿದೆ.

ಬರಹ : ಚಿದಾನಂದ ಭಂಡಾರಿ, ಶಿಕ್ಷಕರು