ಹೊನ್ನಾವರ:- ಕೋರೊನಾ ವಿರುದ್ಧ ದೇಶದ ಜನಪ್ರತಿನಿಧಿಗಳು, ಜನರೊಂದಿಗೆ ಸೇರಿ ಹಗಲು-ರಾತ್ರಿ ಹೋರಾಡುತ್ತಿದ್ದರೇ, ಜಿಲ್ಲೆಯ ಸಂಸದ ಅನಂತ ಕುಮಾರ ಹೆಗಡೆ ಜನರ ಕಣ್ಣಿಗೆ ಕಾಣಿಸದೇ ಭೂಗತರಾಗಿದ್ದು, ಅವರನ್ನು ಹುಡುಕಿಕೊಟ್ಟವರಿಗೆ ಯೋಗ್ಯ ಬಹುಮಾನ ನೀಡಲಾಗುವುದು ಎಂದು ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಕರ್ನಾಟಕದ ಕುವರ ಬಿ. ವಿ. ಶ್ರೀನಿವಾಸ ಘೋಷಿಸಿದ್ದಾರೆ.
“ಆಕ್ಷಿಜನ್ ಮ್ಯಾನ್ ಒಪ್ ಇಂಡಿಯಾ“ ಎಂದೇ ಖ್ಯಾತಿ ಗಳಿಸಿರುವ ರಾಷ್ಟ್ರೀಯ ಅಧ್ಯಕ್ಷ ಬಿ. ವಿ. ಶ್ರೀನಿವಾಸ ಇಂದು ಹೊನ್ನಾವರಕ್ಕೆ ಆಗಮಿಸಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾದರು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರವಿ ಶೆಟ್ಟಿ, ಕವಲಕ್ಕಿ ಅವರ ನಿವಾಸದ ಎದುರು ನಡೆದ ಕಾರ್ಯಕ್ರಮದಲ್ಲಿ ಬೇರೆ ಬೇರೆ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗಳಮುಖಿಯರಿಗೆ, ಆಯ್ದ ಆಶಾ ಕಾರ್ಯಕರ್ತರಿಗೆ ೫೦ಕ್ಕೂ ಹೆಚ್ಚು ಆಹಾರದ ಕಿಟ್ ವಿತರಿಸಿ ಮಾತನಾಡುತ್ತಿದ್ದರು. ಅವರು ಮುಂದುವರಿದು ಮಾತನಾಡಿ ಕೋರೊಮಾ ಸಮಸ್ಯೆ ಎದುರಿಸುವಲ್ಲಿ ರಾಷ್ಟ್ರೀಯ ಮತ್ತು ರಾಜ್ಯದ ಬಿ.ಜೆ.ಪಿ. ಸರಕಾರ ವಿಫಲವಾಗಿದ್ದೂ, ಮೋದಿ ಮತ್ತು ಯಡಿಯೂರಪ್ಪಾ ಸರಕಾರ ಬರೇ ಪೊಳ್ಳು ಬರವಸೆ ನೀಡುತ್ತಾ ಸಂಕಷ್ಟದಲ್ಲಿರುವ ಜನರನ್ನು ವಂಚಿಸುತ್ತಿದ್ದಾರೆ ಎಂದು ಆಪಾದಿಸಿದರು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆದೇಶದಂತೆ, ಕೋರೊನಾ ಸಂಸೃಸ್ತರ ನೆರವಿಗೆ ಪಕ್ಷ ಭೇದ ಮರೆತು ಯುವ ಕಾಂಗ್ರೆಸ್ ಕಾರ್ಯಕರ್ತರು ದಾವಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ದೇಶವ್ಯಾಪಿ ಸಂಚರಿಸಿ ಕೋರೊನಾ ಪೀಡಿತರಿಗೆ ಸಹಾಯ ಹಸ್ತ ಚಾಚಿ, ಅವರ ನೆರವಿಗೆ ಶ್ರಮಿಸುತ್ತಿರುವ ಶ್ರೀನಿವಾಸ ಅವರ ಸೇವೆಯನ್ನು ಪರಿಗಣಿಸಿ, ಹೊನ್ನಾವರ ಯುವ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ನ. ಸೊಹೇಲ್, ಎಂ. ಬಸವರಾಜ್, ಮಾಜಿ ಜಿ.ಪಂ.ಸದಸ್ಯ ಕೃಷ್ಣ ಗೌಡ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಎನ್. ಸುಬ್ರಹ್ಮಣ್ಯ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರವಿ ಶೆಟ್ಟಿ ಕವಲಕ್ಕಿ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಮಲ್ಲಿಕ್, ಇಂಟಕ ಅಧ್ಯಕ್ಷ ಆಗ್ನೇಲ್ ಡಯಾಸ, ಕಾಂಗ್ರೆಸ್ ಮುಖಂಡರಾದ ಬಾಲು ನಾಯ್ಕ, ಹನೀಫ್ ಶೇಖ್, ರಾಜು ನಾಯ್ಕ, ಮಂಕಿ, ಇನ್ನೂ ಮುಂತಾದವರು ಉಪಸ್ಥಿತರಿದ್ದರು. ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಸ್ವಾಗತಿಸಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಶೆಟ್ಟಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹೊನ್ನಾವರ ಯುವ ಕಾಂಗ್ರೆಸ್ ಅಧ್ಯಕ್ಷ ಸಂದೇಶ ಶೆಟ್ಟಿ, ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಪ್ರಭಾತ ನಗರದ ಶ್ರೀ ರಾಮ್ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಜನರಿಗೆ ಅನುಕೂಲವಾಗುವ ಕಾರಣ “ ಕೋರೊನಾ ಲಸಿಕೆ ನೊಂದಣಿ ಕೇಂದ್ರ “ ವನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಉದ್ಘಾಟಿಸಿ, ನಂತರ ಯುವ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ಕೆಲ ಮನೆಗಳಿಗೆ ತೆರಳಿ ಸಾಂಕೇತಿಕವಾಗಿ “ ಲಸಿಕೆ ನೊಂದಣಿ“ ಮಾಡಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.