ಕುಮಟಾ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕುಮಟಾ ಇದರ ವ್ಯಾಪ್ತಿಯಲ್ಲಿ ವ್ಯವಹರಿಸುವ ಯಾವತ್ತೂ ರೈತ ಬಾಂಧವರ ಅನುಕೂಲಕ್ಕಾಗಿ ಹಾಗೂ ಕರೋನಾದಿಂದ ಉಂಟಾಗಿರುವ ಆರ್ಥಿಕ ಮುಗ್ಗಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು ಇದು ರೈತ ಬಾಂಧವರಿಗೆ ಸಂತೋಷದ ಸುದ್ದಿ ಎಂದು ಹೇಳಬಹುದು.
ಕೊರೋನಾ ಲಾಕ್ ಡೌನ್ ಕಾರಣದಿಂದ ಈಗಾಗಲೇ ಮಾರುಕಟ್ಟೆ ಪ್ರಾಂಗಣದಲ್ಲಿ ಸುಮಾರು ಒಂದು ತಿಂಗಳಿಂದ ವಹಿವಾಟು ಇಲ್ಲದಿರುವುದರಿಂದ ರೈತರಿಗೆ ಆರ್ಥಿಕ ಮುಗ್ಗಟ್ಟು ಆಗುತ್ತಿರುವುದನ್ನು ಮನಗಂಡು ಇಂದು ಎಪಿಎಂಸಿ ಕಚೇರಿಯಲ್ಲಿ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ವರ್ತಕ ಪ್ರತಿನಿಧಿ, Campco ಸಂಸ್ಥೆಯ ಪ್ರತಿನಿಧಿ ಮತ್ತು ವ್ಯಾಪಾರಸ್ಥರ ದಲಾಲರ ಹಾಗೂ ಹಮಾಲರ ಸಂಘಟನೆಯ ಪ್ರತಿನಿಧಿಗಳು ಸಂಯುಕ್ತವಾಗಿ ಅನೌಪಚಾರಿಕ ಸಭೆ ಸೇರಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ದಿನಾಂಕ 14/06/2021 ರ ವರೆಗೆ ಸರಕಾರ ಮುಂದುವರಿಸಿರುವ ಲಾಕ್ಡೌನ್ ನಿಂದ ರೈತರಿಗೆ ತೊಂದರೆಯಾಗಬಾರದೆಂದು ಸಮಿತಿಯ ಪ್ರಾಂಗಣದಲ್ಲಿರುವ Campco ಸಂಸ್ಥೆಯ ಕಚೇರಿಯಲ್ಲಿ ಪ್ರತಿದಿನ ಬೆಳಿಗ್ಗೆ ರೈತರು ತಾವು ಬೆಳೆದ ಫ್ಯಾಕ್ಟ್ರಿ ಅಡಿಕೆ ಹಾಗೂ ಚಾಲಿ ಅಡಿಕೆ ಗಳನ್ನು ತರಲು ಅವಕಾಶ ನೀಡಲಾಗಿದೆ.
ಈ ರೀತಿ ರೈತರ ಈ ಎರಡು ಉತ್ಪನ್ನಗಳನ್ನು Campco ಸಂಸ್ಥೆ ಹಾಗೂ ವರ್ತಕರು ಸೇರಿ ಯೋಗ್ಯ ದರವನ್ನು ಎಪಿಎಂಸಿ ಮೂಲಕ ರೈತರಿಗೆ ನೀಡುವ ವ್ಯವಸ್ಥೆ ಲೋಕ್ ಡೌನ್ ತನಕ ಮಾಡಲಾಗಿದೆ. ರೈತರು ತಮ್ಮ ತಾತ್ಕಾಲಿಕ ಆರ್ಥಿಕ ಅಡಚಣೆ ನೀಗಿಸಿಕೊಳ್ಳುವಲ್ಲಿ ತಾವು ಬೆಳೆದ ಫ್ಯಾಕ್ಟರಿ ಅಡಿಕೆ ಹಾಗೂ ಚಾಲಿ ಅಡಿಕೆಯನ್ನು ಸಂಸ್ಥೆಯಲ್ಲಿ ತಂದು Campco ಸಂಸ್ಥೆ ಹಾಗೂ ವರ್ತಕರ ಮೂಲಕ ಉತ್ತಮ ದರ ಹಾಗೂ ಹಣ ಪಡೆದುಕೊಂಡು ಈ ತಾತ್ಕಾಲಿಕ ವ್ಯವಸ್ಥೆಯ ಲಾಭ ಪಡೆಯಬಹುದಾಗಿದೆ.
ಸ್ಥಳೀಯ ರೈತರು ಈ ವ್ಯವಸ್ಥೆಯ ಉಪಯೋಗ ಪಡೆದುಕೊಳ್ಳಬೇಕಾಗಿ ಮಾಧ್ಯಮ ಪ್ರಕಟಣೆ ನೀಡಲಾಗಿದೆ. ಇಂದು ನಡೆದ ಸಭೆಯಲ್ಲಿ ಸಮಿತಿ ಅಧ್ಯಕ್ಷರಾದ ರಮೇಶ್ ಪ್ರಸಾದ್ ಗೋಕರ್ಣ, ಉಪಾಧ್ಯಕ್ಷರಾದ ಶಾಂತರಾಜ ನಾಯ್ಕ, ಪೇಟೆ ಕಾರ್ಯಕರ್ತರ ಪ್ರತಿನಿಧಿ ಅರವಿಂದ ಕೆ ಪೈ, ವರ್ತಕರ ಸಂಘದ ಉಪಾಧ್ಯಕ್ಷರಾದ ಪ್ರಭಾಕರ ಬಾಳಗಿ, ದಲಾಲರ ಸಂಘದ ಅಧ್ಯಕ್ಷರಾದ ಪ್ರಕಾಶ್ ಭಟ್ ಕೂಜಳ್ಳಿ ಹಾಗೂ ಹಮಾಲರ ಸಂಘದ ಅಧ್ಯಕ್ಷರಾದ ಉದಯ ನಾಯ್ಕ ಹಾಗೂ ಸಮಿತಿಯ ಕಾರ್ಯದರ್ಶಿ ಎಂ,ಸಿ, ಪಡಗಾನೂರು ಹಾಜರಿದ್ದರು.