ಕುಮಟಾ: ಪರಿಸರ ದಿನಾಚರಣೆಯ ಅಂಗವಾಗಿ ಪಟ್ಟಣದ ಗುಡಿಗಾರಗಲ್ಲಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮ ಶಾಲೆಯ ಮಕ್ಕಳು ತಮ್ಮ ತಮ್ಮ ಮನೆಯಲ್ಲಿಯೇ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಶಾಲೆಯ ಶಿಕ್ಷಕ ಎಮ್.ಎಮ್.ನಾಯ್ಕ ಅವರು ನೀಡಿದ ನಿರ್ದೇಶನದಂತೆ ಪರಿಸರ ದಿನದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಪರಿಸರದ ಕುರಿತಾದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸುಮಾರು 22 ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಬಂಧವನ್ನು ವಾಟ್ಸ್ಯಾಪ್ ಮೂಲಕ ಕಳುಹಿಸಿದ್ದಾರೆ.
ವಿಜೇತರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಶಿಕ್ಷಕ ಎಮ್.ಎಮ್.ನಾಯ್ಕ ಸಂಘಟಕರ ಪರವಾಗಿ ತಿಳಿಸಿದ್ದಾರೆ.