ಕುಮಟಾ:ತಾಲೂಕಿನ ವನ್ನಳ್ಳಿ, ಅಳ್ವೆದಂಡೆ, ಹೊಸಕಟ್ಟಾ, ತದಡಿ ಸೇರಿದಂತೆ ವಿವಿಧ ಭಾಗಗಳಲ್ಲಿ ತೌಕ್ತೆ ಚಂಡಮಾರುತದ ಪರಿಣಾಮದಿಂದ ತೀವ್ರ ಹಾನಿಗೊಳಗಾದ ಸ್ಥಳಗಳಿಗೆ ಮೀನುಗಾರಿಕಾ ಸಚಿವ ಎಸ್. ಅಂಗಾರ ಅವರು ಶಾಸಕ ದಿನಕರ ಶೆಟ್ಟಿಯವರೊಡನೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಸಚಿವ ಅಂಗಾರ ಮಾತನಾಡಿ, ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಮೀನುಗಾರರಿಗೆ ಹಾಗೂ ಮನೆಗಳಿಗೆ ನೀರು ನುಗ್ಗಿ ನಷ್ಟ ಅನುಭವಿಸಿದ ಕುಟುಂಬಸ್ಥರಿಗೆ ಶೀಘ್ರದಲ್ಲೇ ಪರಿಹಾರ ಒದಗಿಸುವ ಬಗ್ಗೆ ಭರವಸೆ ನೀಡಿ, ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ನಡೆಸುವ ಬಗ್ಗೆ ಮಾಹಿತಿ ನೀಡಿದರು.

ತೌಕ್ತೆ ಚಂಡಮಾರುತದ ಪರಿಣಾಮ ತಾಲೂಕಿನ ವಿವಿಧ ಭಾಗಗಳಲ್ಲಿ ಸಂಭವಿಸಿದ ಹಾನಿ, ಮೀನುಗಾರರಿಗೆ ಉಂಟಾದ ನಷ್ಟ, ದೋಣಿ ಹಾಗೂ ಬೋಟ್ ಸೇರಿದಂತೆ ಮೀನುಗಾರಿಕಾ ಪರಿಕರ ನೀರು ಪಾಲು, ಸರ್ಕಾರಿ ಆಸ್ತಿ ಪಾಸ್ತಿಯ ಹಾನಿ, ಮನೆಗಳಿಗೆ ನೀರು ನಿಗ್ಗಿ ಹಾನಿ ಸಂಭವಿಸಿದ ಬಗ್ಗೆ ಹಾಗೂ ತದಡಿ ಬಂದರಿನ ಅಭಿವೃದ್ಧಿಯ ಬಗ್ಗೆ ಶಾಸಕ ದಿನಕರ ಶೆಟ್ಟಿಯವರು ಸಚಿವರ ಗಮನಸೆಳೆದರು.

RELATED ARTICLES  ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಯೋಗಾಲಯ ಉದ್ಘಾಟನೆ

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು, ಕಾರ್ಯಕರ್ತರು, ಉಪವಿಭಾಗಾಧಿಕಾರಿ ಎಮ್. ಅಜಿತ ರೈ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಇದ್ದರು.

ಅದರಂತೆ ಅಂಕೋಲಾ ತಾಲ್ಲೂಕಿನ ಹಾರವಾಡ ಮತ್ತು ಗಾಬಿತಕೇಣಿ ಪ್ರದೇಶದ ಸಮುದ್ರ ಕೊರೆತ ಪ್ರದೇಶವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಶ್ರೀ ಎಸ್. ಅಂಗಾರ ಅವರೊಂದಿಗೆ ಶಾಸಕಿ ರೂಪಾಲಿ ನಾಯ್ಕ ವೀಕ್ಷಿಸಿದರು.

ತೌಕ್ತೆ ಚಂಡಮಾರುತದಿಂದ ಹಾರವಾಡದಲ್ಲಿ ಉಂಟಾದ ಕಡಲ ಕೊರೆತಕ್ಕೆ ಸಮುದ್ರ ಕೊರೆತ ಪ್ರತಿಬಂಧಕ ಕಾಮಗಾರಿಗೆ 6.5 ಕೋಟಿ ಮತ್ತು ಗಾಬಿತಕೇಣಿಯಲ್ಲಿ 1 ಕೋಟಿ ಅನುದಾನವನ್ನು ಸಮುದ್ರ ಕೊರೆತ ಪ್ರತಿಬಂಧಕ ಕಾಮಗಾರಿಗೆ ಒದಗಿಸುವಂತೆ ಮನವಿ ಸಲ್ಲಿಸಲಾಯಿತು.

RELATED ARTICLES  ಪರೇಶ್ ಮೇಸ್ತಾರನ್ನು ಸ್ಮರಿಸಿದ ಶಾಸಕ‌ ಸುನೀಲ್‌ ನಾಯ್ಕ: ಅವರ ಬಗ್ಗೆ ಬರೆದಿದ್ದೇನು ಗೊತ್ತಾ?

ಸಮುದ್ರದ ಅಲೆಗಳಿಂದ ದೋಣಿಗಳಿಗೆ ಹಾನಿಯಾಗದಂತೆ ತಡೆಯಲು ಬೇಲೆಕೇರಿ ಬಂದರಿನಲ್ಲಿ ಅಲೆ ತಡೆಗೋಡೆ ನಿರ್ಮಾಣ ಅವಶ್ಯಕವಾಗಿದೆ. ಸಮುದ್ರ ಅಲೆ ತಡೆಗೋಡೆ ನಿರ್ಮಿಸುವ ವಿನ್ಯಾಸ ಮತ್ತು ಅದರ ಅಧ್ಯಯನದ ಮಾಡಲು ಅನುದಾನ ನೀಡುವಂತೆ ಸಚಿವರಲ್ಲಿ ಕೇಳಿ ಕೊಂಡಾಗ ಎರಡು ದಿನದಲ್ಲಿ ಇದಕ್ಕೆ ತಗಲುವ 24 ಲಕ್ಷ ಅನುದಾನವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ಸಂದರ್ಭದಲ್ಲಿ ಮೀನುಗಾರಿಕೆ ಬಂದರು ಇಲಾಖೆಯ ಅಧಿಕಾರಿಗಳು, ಮೀನುಗಾರ ಮುಖಂಡರು ಉಪಸ್ಥಿತರಿದ್ದರು.