ಅಂಕೋಲಾ: ಅಂಕೋಲಾ:ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಬಂಗಾರದ ಆಭರಣ ಕಳ್ಳತನ ಮಾಡಿದ ಘಟನೆ ಅಂಕೋಲಾ ತಾಲೂಕಿನ ತೆಂಕಣಕೇರಿಯಲ್ಲಿ ನಡೆದಿದೆ.
ತಾಲೂಕಿನ ಕುಂಬಾರಕೇರಿ – ಪೂಜಗೇರಿ ಮಧ್ಯದ ತೆಂಕಣಕೇರಿ ಪ್ರದೇಶದಲ್ಲಿ ಮಂಜುಗುಣಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ ಶಿಕ್ಷಕ ದಂಪತಿಗಳ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿದ್ದು, ಬೆಳಿಗ್ಗೆ ಮನೆಯವರ ಗಮನಕ್ಕೆ ಬಂದಿದೆ.
ಮಂಗಳವಾರ ರಾತ್ರಿಯಿಂದ ಗುರುವಾರ ಬೆಳಗಿನ ಅವಧಿಯಲ್ಲಿ ಈ ಕಳ್ಳತನವಾಗಿರುವ ಸಾಧ್ಯತೆಯಿದ್ದು,ಮನೆಯಲ್ಲಿ ಯಾರು ಇರದಿರುವುದನ್ನು ಖಚಿತಪಡಿಸಿಕೊಂಡೆ ಸ್ಥಳೀಯರ ಸಹಕಾರದಲ್ಲಿ ಕಳ್ಳತನ ನಡೆಸಿರುವ ಸಾಧ್ಯತೆ ಕೇಳಿಬರುತ್ತಿದೆ.
ಮನೆಯ ಮಾಲೀಕ ಸುಬಾಷ್ ನಾರಾಯಣ ನಾಯ್ಕ ಮತ್ತು ಆತನ ಕುಟುಂಬ ಕಾರವಾರದ ಚೆಂಡಿಯಾದಲ್ಲಿ ಸಂಬಂದಿಯೊಬ್ಬರು ಸಾವನ್ನಪ್ಪಿದ್ದು ಅವರ ಮನೆಗೆ ಮಂಗಳವಾರ ಸಂಜೆ ತೆರಳಿದ್ದರು.
ಮನೆಯಲ್ಲಿ ಯಾರೂ ಇಲ್ಲದದ್ದನ್ನು ಗಮನಿಸಿದ ಕಳ್ಳರು ಮುಂದಿನ ಬಾಗಿಲು ಮುರಿಯಲು ಪ್ರಯತ್ನಿಸಿದ್ದಾರೆ ಅದು ಮುರಿಯದೆ ಇದ್ದಾಗ ಹಿಂಬದಿ ಬಾಗಿಲನ್ನು ಮುರಿದು ಮನೆಯಲ್ಲಿದ್ದ 43 ಗ್ರಾಂ ಗಣಪತಿ ದೇವರ ಬಂಗಾರದ ಆಭರಣವನ್ನು ಕದ್ದು ಬೆಳ್ಳಿ ಆಭರಣಗಳನ್ನು ಅಲ್ಲಿಯೇ ಬಿಟ್ಟು ತೆರಳಿದ್ದಾರೆ ಎನ್ನಲಾಗಿದೆ.
ಒಳ ಪ್ರವೇಶಿಸಿದ ಕಳ್ಳರು ಪ್ರತ್ಯೇಕ ಎರಡು ಬೆಡ್ ರೂಮಗಳಲ್ಲಿದ್ದ ಕಪಾಟುಗಳನ್ನು ತೆರೆದು ಅದರಲ್ಲಿದ್ದ ವಸ್ತ್ರ,ಬ್ಯಾಗ್ ಮತ್ತಿತರ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.
ಗುರುವಾರ ಬೆಳಿಗ್ಗೆ ಅಂಕೋಲಾಕ್ಕೆ ವಾಪಸ ಆದ ವೇಳೆ ಮನೆ ಮುಂಬಾಗಿಲು ಅರ್ಧ ತೆರೆದಿದ್ದನ್ನು ನೋಡಿ,ಗಾಬರಿಯಾಗಿ ಸಂಬಂಧಿ ನಾಗೇಂದ್ರ ನಾಯ್ಕ ಮೂಲಕ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.
ಸ್ಥಳಕ್ಕೆ ಬೆರಳಚ್ಚು ತಂತ್ರಜ್ಞರು ಭೇಟಿನೀಡಿದ್ದಾರೆ. ಪಿಎಸೈ ಈ ಸಿ ಸಂಪತ್ ಪ್ರಕರಣ ದಾಖಲಿಸಿಕೊಂಡು ಪ್ರತ್ಯೇಕ ತಂಡ ರಚಿಸಿ ತನಿಖೆ
ಕೈಗೊಂಡಿದ್ದಾರೆ. ಅಪರಾಧ ವಿಭಾಗದ ಹಿರಿಯ ಹವಾಲ್ದಾರ್ ಮೋಹನದಾಸ ಶೇಣ್ಣಿ, ಹೆಚ್ ಸಿ ಪರಮೇಶ್,ಸಿಬ್ಬಂದಿ ಶ್ರೀಕಾಂತ್ ಕಟಬರ್ ಕರ್ತವ್ಯ ನಿರ್ವಹಿಸಿದರು.
ಲಾಕ್ಡೌನ್ ನಿಂದ ಮಗಳ ವಿವಾಹ ಮುಂದೂಡಲ್ಪಟ್ಟು,ಮದುವೆಗೆ ಮಾಡಿಸಿದ ಬಂಗಾರ ದೊರೆಯಬಹುದೆಂದು ಕಳ್ಳರು ಸಂಚು ನಡೆಸಿರುವ ಸಾಧ್ಯತೆಯು ಕೇಳಿಬಂದಿತ್ತು,ಮನೆಯವರ ಪ್ರಜ್ಞಾವಂತಿಕೆ ಯಿಂದ ಆ ಬಂಗಾರಗಳನ್ನು ಸೇಫ್ ಲಾಕರ್ ಇಲ್ಲವೇ ತಮ್ಮ ಜೊತೆ ಕೊಂಡೊಯ್ದು ಇತರೆ ಸುರಕ್ಷಿತ ಸ್ಥಳಗಳಲ್ಲಿ ಇಟ್ಟಿದ್ದರಿಂದ ಅವು ಕಳ್ಳರ ಪಾಲಾಗಲಿಲ್ಲ ಎನ್ನಲಾಗಿದೆ.ಆದರೂ ಕಳ್ಳರು ಬೆಲೆಬಾಳುವ ಸೀರೆಗಳನ್ನು ಕಳ್ಳತನ ನಡೆಸಿರುವ ಮಾಹಿತಿ ಇದೆ.