ಕಾರವಾರ: ಶ್ರೀರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ‘ಜ್ಞಾನ- ವಿಜ್ಞಾನ ಚಿಂತನ ಸತ್ರ’ ಸರಣಿಯಲ್ಲಿ ಈ ತಿಂಗಳ 13ರಂದು “ಸ್ವಸ್ಥ ಮನಸ್ಸಿಗಾಗಿ ಸುಖನಿದ್ದೆ” ಎಂಬ ವಿಷಯದ ಬಗ್ಗೆ ಆನ್‍ಲೈನ್ ವಿಚಾರ ಸಂಕಿರಣ ಆಯೋಜಿಸಲಾಗಿದೆ.
ಬೆಳಿಗ್ಗೆ 11.30ರಿಂದ ವಿಚಾರ ಸಂಕಿರಣ ನಡೆಯಲಿದ್ದು, ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಸ್ವಾಮೀಜಿಯವರು ಸಾನ್ನಿಧ್ಯ ವಹಿಸುವರು. ಮಂಗಳೂರಿನ ಯೆನಪೋಯ ಮೆಡಿಕಲ್ ಕಾಲೇಜು ಮನಃಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಖ್ಯಾತ ಮನಃಶಾಸ್ತ್ರಜ್ಞರಾದ ಡಾ.ಅನಿಲ್ ಕಾಕುಂಜೆ ಮುಖ್ಯ ಉಪನ್ಯಾಸ ನೀಡುವರು ಎಂದು ವಿದ್ಯಾ ಪರಿಷತ್ ಉಪಾಧ್ಯಕ್ಷ ಮರುವಳ ನಾರಾಯಣ ಭಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಸಾರ್ವತ್ರಿಕ ಸೋಂಕಿನ ಕಾಲಘಟ್ಟದಲ್ಲಿ ಮಾನಸಿಕ ಒತ್ತಡ, ಖಿನ್ನತೆ, ನಿದ್ರಾಹೀನತೆ ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಚಿತ್ತಸ್ವಾಸ್ಥ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಿದ್ದೆಯ ಮಹತ್ವದ ಬಗ್ಗೆ, ಸುಖನಿದ್ದೆಯ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಿಗೆ ಡಾ.ಕಾಕುಂಜೆ ಮಾಹಿತಿ ನೀಡುವರು.
ವಿದ್ಯಾ ಪರಿಷತ್ ಅಧ್ಯಕ್ಷ ಎಂ.ಆರ್.ಹೆಗಡೆ, ಆಡಳಿತಾಧಿಕಾರಿ ಸುರೇಂದ್ರ ಹೆಗಡೆ ಮತ್ತಿತರರು ಭಾಗವಹಿಸುವರು. ಗೂಗಲ್‍ಮೀಟ್ ಪ್ಲಾಟ್‍ಫಾರಂನಲ್ಲಿ ನಡೆಯುವ ವಿಚಾರ ಸಂಕಿರಣದಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ (ಲಿಂಕ್: <https://meet.google.com/ftr-mrdq-oec>) ಎಂದು ಪ್ರಕಟಣೆ ಹೇಳಿದೆ.