ಕುಮಟಾ : ಈ ಸೆಲ್ಫಿ ಹುಚ್ಚು ಅದೆಷ್ಟೋ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುವ ಪರಿಸ್ಥಿತಿಯನ್ನು ತಂದೊಡ್ಡಿದೆಯೋ ತಿಳಿದಿಲ್ಲ. ದೂರದ ಊರುಗಳಿಂದ ಬಂದು ಸಮುದ್ರದಡದಲ್ಲಿ ಸೆಲ್ಫಿ ತೆಗೆಯುವಾಗ ತಮ್ಮ ಪ್ರಾಣ ಕಳೆದುಕೊಂಡವರು ಸಹಸ್ರಾರು ಜನ. ಆದರೂ ಈ ಬಗ್ಗೆ ಎಚ್ಚರಿಕೆ ವಹಿಸದ ಯುವಜನತೆ ಸೆಲ್ಫಿ ಹುಚ್ಚಿಗಾಗಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಸಾವಿನ ಸರಣಿ ಮುಂದುವರೆದಿದೆ.
ಗುರುವಾರ ಮಧ್ಯಾಹ್ನ ೨-೩೦ ರ ಸುಮಾರಿಗೆ ಕುಮಟಾದ ವನ್ನಳ್ಳಿ ಬೀಚ್ ನೋಡಲು ಹೋಗಿ ಸಮುದ್ರದಲೆಗಳ ರುದ್ರ ನರ್ತನಕ್ಕೆ
ಆಕರ್ಷಿತನಾಗಿ ನೀರಿಗಿಳಿದು ಸೆಲ್ಸಿ ಕ್ಲಿಕ್ಕಿಸಲು ಮುಂದಾದವೇಳೆ ಕಾಲು ಜಾರಿ ಚಪ್ಪಲಿ ಕೊಚ್ಚಿಕೊಂಡು ಹೋದಾಗ ಅದನ್ನು
ಹಿಡಿಯಲು ಮುಂದಾಗಿ ಸಮುದ್ರದ ಆಳವನ್ನು ಅರಿಯದೇ ನೀರು ಪಾಲಾಗಿದ್ದ ಯುವಕ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾನೆ.
ಮೃತ ಯುವಕನನ್ನು ಕೊಪ್ಪಳದ ಹೊಸಲಿಂಗಪುರ ನಿವಾಸಿ ಅಭಿಷೇಕ್ ಹನುಮಂತ ಬೋಮ್ ಎಂದು ಗುರುತಿಸಲಾಗಿದೆ. ಮೊದಲು ಭಟ್ಕಳದಲ್ಲಿ ಸ್ಟೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದ ತನ್ನ ಅಕ್ಕನಿಗೆ ಕುಮಟಾಕ್ಕೆ ವರ್ಗಾವಣೆಯಾದಾಗ ರೂಮ್ ಖಾಲಿಮಾಡಿ ಸಮಾನುಗಳನ್ನು ಶಿಫ್ಟ್ ಮಾಡಲು ಸಹಾಯಮಾಡಲು ಬಂದಿದ್ದ ಈತ
ಕೊರೊನಾ ಲಾಕ್‌ಡೌನ್ ಕಾರಣ ಊರಿಗೆ ಮರಳಲು ಸಾಧ್ಯವಾಗದೇ ಕುಮಟಾದಲ್ಲಿಯೇ ಉಳಿದುಕೊಂಡಿದ್ದ ಎನ್ನಲಾಗಿದೆ. ಮನೆಯಲ್ಲಿ ಎಲ್ಲರಿಗಿಂತ ಕಿರಿಯವನಾದ ಈತ ಮನೆಗೆ ಒಬ್ಬನೇ ಗಂಡು ಮಗುವಾಗಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಗುರುವಾರ ವನ್ನಳ್ಳಿ ಬೀಚ್‌ನಲ್ಲಿ ಯುವಕನೊಬ್ಬ ಸಮುದ್ರಪಾಲಾದ ಸುದ್ದಿ ಕಾಳಿಚ್ಚಿನಂತೆ ಹಬ್ಬಿತಾದರೂ ಯುವಕ ಸ್ಥಳೀಯನಲ್ಲದ ಕಾರಣ ಯಾರು ಎನ್ನುವ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿರಲಿಲ್ಲ.
ನಂತರ ಯುವಕ ಬಿಟ್ಟುಹೋಗಿದ್ದ ಬೈಕ್‌ನಲ್ಲಿನ ಇನ್ನೂರೆನ್ಸ್ ಕಾಪಿಯನ್ನು ಪರಿಶೀಲಿಸಿ ಅದರಲ್ಲಿನ ಮೊಬೈಲ್ ನಂಬರ್‌ನ್ನು ಸಂಪರ್ಕಿಸಿದಾಗ ಈತ ಕೊಪ್ಪಳ ಮೂಲದ ಯುವಕ ಎನ್ನುವುದು ತಿಳಿದುಬಂದಿದೆ.
ಈತ ಗುರುವಾರ ಮಧ್ಯಾಹ್ನ ತನ್ನ ಅಕ್ಕನನ್ನು ಬ್ಯಾಂಕ್‌ಗೆ ಬಿಟ್ಟು ಮನೆಗೆ ವಾಪಸ್ಸಾಗುತ್ತಿರುವಾಗ ವನ್ನಳ್ಳಿ ಬೀಚ್‌ನಲ್ಲಿ ಸುತ್ತಾಡಿಬರಲು ಹೋಗಿದ್ದಾಗ ಸೆಲ್ಫಿ ತೆಗೆಯುವ ವೇಳೆ ಈ ಅವಾಂತರ ಸಂಭವಿಸಿದೆ.