ಭಟ್ಕಳ: ಕರೋನಾ ಮಹಾಮಾರಿಯಿಂದಾಗಿ ಅನೇಕ ಜನರು ದಿನನಿತ್ಯದ ಬದುಕು ಸಾಗಿಸುವುದು ಕಷ್ಟ ಎಂಬಂತಾಗಿದೆ. ಲಾಕ್ ಡೌನ್ ಅನಿವಾರ್ಯವಾದರೂ ಅನೇಕರ ಬದುಕಿಗೆ ಬರೆ ಇಟ್ಟಿದೆ.
ಭಟ್ಕಳ ತಾಲೂಕಿನಲ್ಲಿ ಅನಾರೋಗ್ಯ ಹಾಗೂ ಲಾಕ್‌ಡೌನ್ ವೇಳೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದು ದುಡಿಮೆ ಇಲ್ಲದೆ ಮನನೊಂದು ಆಟೋ ಚಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಬಗ್ಗೆ ಸ್ಥಳೀಯ ವರದಿ ಲಭ್ಯವಾಗಿದೆ.
ಭಟ್ಕಳ ತಾಲ್ಲೂಕಿನ ಮಾರುಕೇರಿ ಪಂಚಾಯತ್ ವ್ಯಾಪ್ತಿಯ ಕಿತ್ರೆಯಲ್ಲಿ ಆಟೋ ಚಾಲಕ ಮನೆ ಹಿಂಬದಿಯಲ್ಲಿ ಇರುವ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಮೃತ ವ್ಯಕ್ತಿ ಕುಳ್ಳ ಸೋಮಯ್ಯ ಗೊಂಡ ಎಂದು ಗುರುತಿಸಲಾಗಿದೆ, ಇವರು ಸಾಲಬಾಧೆಯಿಂದ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದು ಲಾಕ್ ಡೌನ್ ನಲ್ಲಿ ಇನ್ನೂ ಸಂಕಷ್ಟದ ಸ್ಥಿತಿಯಲ್ಲಿ ಇದ್ದರು ಎನ್ನಲಾಗಿದೆ.
ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಮೃತ ವ್ಯಕ್ತಿಯ ಭಾವ ಮೈದ ರಾಮ ಕುಪ್ಪ ಗೊಂಡ ದೂರು ನೀಡಿದ್ದು ದೂರು ದಾಖಲಿಸಿ ಕೊಂಡ ಎಎಸೈ ಕೃಷ್ಣಾನಂದ ನಾಯ್ಕ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ. ನಿಖರ ಕಾರಣ ಹಾಗೂ ಇತರ ಮಾಹಿತಿ ತನಿಖಾ ನಂತರ ಬರಬೇಕಿದೆ.