ಕುಮಟಾ : ಸಾಧಕನಿಗೆ ಗುರಿಯೊಂದೇ ಲಕ್ಷ್ಯವಾಗಿರುತ್ತದೆ. ತಮ್ಮ ಗುರಿ ತಲುಪಿ ಸಾಧನೆ ಮಾಡಿದವರು ಅನೇಕರಿದ್ದಾರೆ. ಕುಮಟಾದಲ್ಲಿಯೂ ಸಾಧಕರಿಗೇನೂ ಕಡಿಮೆಯಿಲ್ಲ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿದ್ದಾರೆ. ಕುಮಟಾದ ವಿಶೇಷ ಪ್ರತಿಭೆಯೋರ್ವಳು, ವಿದೇಶದಲ್ಲಿಯೂ ಸಾಧನೆ ಮಾಡುತ್ತಿರುವುದು ಸಂತಸದ ಸಂಗತಿ.
ಉತ್ತರ ಕನ್ನಡ ಕುಮಟಾ ಮೂಲದ ಕಡೇಕೋಡಿಯ ಯುವತಿಯೋರ್ವರು ಅಮೇರಿಕಾದ ಕ್ಯಾಲಿಫೋರ್ನಿಯಾ ಬಾರ್ ಕೌನ್ಸಿಲ್‌ನಲ್ಲಿ ಅಟರ್ನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕುಮಟಾ ತಾಲೂಕಿನ ಕಡೇಕೋಡಿಯ ಕು. ದಿಶಾ ಭಾಗವತ್ ಈ ಅನುಪಮ ಸಾಧನೆ ಮಾಡಿದವರಾಗಿದ್ದಾರೆ. ಇವರು ಬೆಂಗಳೂರಿನ ಉದ್ಯಮಿ, ದಿಶಾ ಎಂಟರ್ ಪ್ರೈಸಸ್ ಮಾಲೀಕ ಮಂಜುನಾಥ ಭಾಗವತ್, ಲಲಿತಾ ಭಾಗವತ್ ದಂಪತಿ ಪುತ್ರಿ.
ಬೆಂಗಳೂರಿನಲ್ಲಿ ಕ್ರೈಸ್ತ ಕಾಲೇಜಿನಲ್ಲಿ ಎಲ್‌ಎಲ್ ಬಿ ಪೂರ್ಣಗೊಳಿಸಿದ ದಿಶಾ, ಅಮೇರಿಕಾದಲ್ಲಿ ಯುಎಸ್‌ಸಿ ಮಾಸ್ಟರ್ ಡಿಗ್ರಿ ಪಡೆದಿದ್ದರು. ಕ್ಯಾಲೇಫೋರ್ನಿಯಾ ಬಾರ್ ಕೌನ್ಸಿಲ್ ನಡೆಸುವ ಕಠಿಣ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಅಟರ್ನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಅಮೇರಿಕಾದಲ್ಲಿ ಈ ಮೊದಲು ಸಿಟಿ ಅಟರ್ನಿ ಕಚೇರಿಯಲ್ಲಿ ಕೂಡ ಸೇವೆ ಸಲ್ಲಿಸಿದ್ದಾರೆ. ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿರುವ ಇವರು ಕರಾಟೆಯಲ್ಲಿ ಬ್ಲಾಕ್ ಬೆಲ್ಟ ಪಡೆದಿದ್ದಾರೆ. ಇದರಲ್ಲೂ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಬಂಗಾರ ಪದಕ ವಿಜೇತರಾಗಿದ್ದಾರೆ.
ಇವರು ಈಚೆಗಷ್ಟೇ ಮಿಸ್ ಕರ್ನಾಟಕ ವಿಜೇತರಾಗಿರುವ ಭಾವನಾ ಭಾಗವತ್ ಅವರ ಸಹೋದರಿ ಎಂಬುದು ಉಲ್ಲೇಖನೀಯ.